ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ವೈದ್ಯಕೀಯ ವ್ಯವಸ್ಥೆ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಕಿಮ್ಸ್ (KMCRI) ಆಸ್ಪತ್ರೆಯಲ್ಲಿ 14 ಹಾಸಿಗೆಗಳಿರುವ ಸುಸಜ್ಜಿತ ಹಾಗೂ ಹವಾನಿಯಂತ್ರಿತ ಹೀಟ್ ಸ್ಟ್ರೋಕ್ ವಿಶೇಷ ವಾರ್ಡ್ ಆರಂಭಿಸಲಾಗಿದೆ. ಬಿಸಿಗಾಳಿಯಿಂದ ಬಳಲುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಈ ವ್ಯವಸ್ಥೆ ಮಾಡಲಾಗಿದೆ.
ವಾರ್ಡ್ನಲ್ಲಿ ಒಆರ್ಎಸ್ ದ್ರಾವಣ, ಐಸ್ ಕ್ಯೂಬ್ಗಳು, ಥರ್ಮಾಮೀಟರ್, ವೆಂಟಿಲೇಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ. ಜೊತೆಗೆ ಪರಿಣತಿ ಹೊಂದಿದ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೀವ್ರ ಉಷ್ಣತೆ ಅಥವಾ ಹೀಟ್ ಸ್ಟ್ರೋಕ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತೆ ಕಿಮ್ಸ್ ಆಸ್ಪತ್ರೆ ಆಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.
ಬಿಸಿಗಾಳಿಯ ಈ ತೀವ್ರ ಪರಿಸ್ಥಿತಿಯಲ್ಲಿ ಕಿಮ್ಸ್ ಕೈಗೊಂಡ ಈ ಕ್ರಮವು ಜೀವ ರಕ್ಷಕ ವೈದ್ಯಕೀಯ ಸೌಲಭ್ಯವಾಗಿ ಮಹತ್ವ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.




