Hubli News: ಹುಬ್ಬಳ್ಳಿ: ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆಗೈದಿದ್ದ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಬಿಹಾರ ಮೂಲದ ರಿತೇಶ್ ಕುಮಾರ್ ಮೃತ ಆರೋಪಿ. ಹುಬ್ಬಳ್ಳಿಯ ವಿಜಯನಗರದಲ್ಲಿನ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಆರೋಪಿ ರಕ್ಷಿತ್ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಆರೋಪಿ ರಿತೇಶ್ ಕುಮಾರ್ ಬಾಲಕಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾಲಕಿ ಹೆತ್ತವರು ಕೂಲಿ ಕಾರ್ಮಿಕರಾಗಿದ್ದಾರೆ. ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಮನೆಗೆಲಸ ಮಾಡುತ್ತಿದ್ದಾರೆ. ಮೃತ ಬಾಲಕಿಯ ತಾಯಿ ರವಿವಾರ ಮನೆಗೆಲಸಕ್ಕೆಂದು ವಿಜಯನಗರಕ್ಕೆ ಹೋಗಿದ್ದಾರೆ. ತಾಯಿ ಜೊತೆ ಬಾಲಕಿ ಕೂಡ ಹೋಗಿದ್ದಾಳೆ. ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದಾಗ, ಬಾಲಕಿ ಮನೆಯ ಹೊರಗಡೆ ಆಟವಾಡುತ್ತಿದ್ದಳು. ಈ ವೇಳೆ, ಇಲ್ಲಿಗೆ ಬಂದ ಆರೋಪಿ ರಿತೇಶ್ ಕುಮಾರ್ ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ. ಬಾಲಕಿ ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ, ಅಧ್ಯಾಪಕ ನಗರದಲ್ಲಿನ ಖಾಲಿ ಜಾಗದಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ಬಾಲಕಿ ಹತ್ಯೆ ಖಂಡಿಸಿ ಅಶೋಕನಗರ ಠಾಣೆ ಎದುರು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸ್ಥಳೀಯರು ಧರಣಿ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಬಾಲಕಿ ಪೋಷಕರಿಂದ ಮಾಹಿತಿ ಪಡೆದರು. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಗುಂಡೇಟಿಗೆ ಆರೋಪಿ ಬಲಿ
ಆರೋಪಿಯನ್ನು ಬಂಧಿಸಲು ಹುಬ್ಬಳ್ಳಿ ಪೊಲೀಸರು ಬಲೆ ಬೀಸಿದರು. ಆರೋಪಿ ಅಡಗಿರುವ ಸ್ಥಳದ ಮಾಹಿತಿ ತಿಳಿದ ಪೊಲೀಸರು ಆತನನ್ನು ಬಂಧಿಸಲು ತೆರಳಿದರು. ಈ ವೇಳೆ ಆರೋಪಿ ರಿತೇಶ್ ಕುಮಾರ್ ಪೊಲೀಸರ ಮೇಲೆ ದಾಳಿ ಮಾಡಿ, ಓಡಿ ಹೋಗಲು ಯತ್ನಸಿದನು. ಆತ್ಮರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು ಆರೋಪಿ ರಿತೇಶ್ ಕುಮಾರ್ ಬೆನ್ನಿಗೆ ತಗುಲಿದೆ. ಕೂಡಲೆ, ಪೊಲೀಸರು ಆರೋಪಿ ರಿತೇಶ್ ಕುಮಾರ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ರಿತೇಶ್ ಕುಮಾರ್ ಮೃತಪಟ್ಟಿದ್ದಾನೆ.
ಆರೋಪಿ ಓಡಿ ಹೋಗಲು ಯತ್ನಿಸಿದಾಗ ಫೈರಿಂಗ್: ಶಶಿಕುಮಾರ್
ಪ್ರಕರಣ ಸಂಬಂಭ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, “ಕೊಪ್ಪಳ ಮೂಲದ ಕುಟುಂಬ ಮನೆಗೆಲಸ, ಪೇಂಟಿಂಗ್ ಕೆಲಸ ಮಾಡುವ ಸಲುವಾಗಿ ಹುಬ್ಬಳ್ಳಿಗೆ ಬಂದು ನೆಲೆಸಿದೆ. ಮೃತಪಟ್ಟಿರುವ ಬಾಲಕಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದಾರೆ. ಬಾಲಕಿ ತಾಯಿ ಮನೆಗೆಲಸಕ್ಕೆ ತೆರಳುವಾಗ ಜೊತೆಯಲ್ಲೇ ಕರೆದೊಯ್ದಿದ್ದರು. ತಾಯಿ ಮನೆಯೊಳಗೆ ತೆರಳಿದ್ದಾಗ ಮಗು ಹೊರಗಡೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಮಗುವನ್ನು ಆರೋಪಿ ರಿತೇಶ್ ಕುಮಾರ್ ಎತ್ತಿಕೊಂಡು ಹೋಗಿದ್ದಾನೆ” ಎಂದು ತಿಳಿಸಿದರು.
ಸಿಸಿಟಿವಿ ದೃಶ್ಯಾವಗಳಿಗಳನ್ನ ಆಧರಿಸಿ ಆರೋಪಿ ಕೃತ್ಯವೆಸಗಿದ್ದು ಪತ್ತೆಯಾಗಿತ್ತು. ಆರೋಪಿ ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ವಾಸವಿದ್ದನು. ಈ ಮಾಹಿತಿ ಆಧರಿಸಿ, ಆರೋಪಿಯನ್ನು ಬಂಧಿಸಲು ತೆರಳಿದಾಗ ನಮ್ಮ ಸಿಬ್ಬಂದಿ ಮೇಲೆ ದಾಳಿ ಮಾಡಿದನು. ಈ ವೇಳೆ, ಪಿಎಸ್ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರು. ಆರೋಪಿ ಓಡಿ ಹೋಗಲು ಯತ್ನಿಸಿದಾಗ ಆತನ ಮೇಲೆ ಫೈರಿಂಗ್ ಮಾಡಿದರು. ಆರೋಪಿಯ ಬೆನ್ನಿಗೆ ಗುಂಡು ತಗುಲಿತ್ತು, ಆಸ್ಪತ್ರೆಗೆ ದಾಖಲಿಸಿದ್ವಿ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ರಿತೇಶ್ ಕುಮಾರ್ ಮೃತಪಟ್ಟಿದ್ದಾನೆ. ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಬಿಡಲ್ಲ” ಎಂದು ಹೇಳಿದರು.