Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.
ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭೇಟಿ ನೀಡಿದ್ದು, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಸಿಲಿಂಡರ್ ಸ್ಫೋಟದಲ್ಲಿ ನಿಜಲಿಂಗಪ್ಪ, ಸಂಜಯ ನಿಧನ ಹೊಂದಿದ್ದಾರೆ. ಈಗ ಏನು ಮಾತನಾಡಬೇಕು ಅಂತ ತೋಚುತ್ತಿಲ್ಲ. ಸರ್ಕಾರ, ಜಿಲ್ಲಾಡಳಿತ, ಕಿಮ್ಸ್ ಅವರನ್ನ ಬದುಕಿಸಲು ಪ್ರಯತ್ನ ಮಾಡಿದ್ವಿ. 4 ಎಕ್ಸ್ಪರ್ಟ್ ವೈದ್ಯರನ್ನ ಕರೆಯಿಸಿ ಬದುಕಿಸಲು ಸಕಲ ಪ್ರಯತ್ನ ಮಾಡಲಾಗಿತ್ತು. ಆದರೆ ಇದನ್ನ ಮೀರಿ ಸುಟ್ಟ ಪ್ರಮಾಣ ಹೆಚ್ಚಾಗಿದ್ದರಿಂದ ಉಳಿಸಿಕೊಳ್ಳಲಾಗಲ್ಲಿಲ್ಲ ಎಂದು ಲಾಡ್ ಬೇಸರ ಹೊರಹಾಕಿದ್ದಾರೆ.
ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ನಷ್ಟ ಎದುರಿಸುವ ಶಕ್ತಿ ಆ ಕುಟುಂಬಕ್ಕೆ ನೀಡಲಿ. ಮುಖ್ಯಮಂತ್ರಿಗಳು ಸಹ ಆ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೃತ ಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ನಿರ್ದೇಶನದ ಮೇಲೆ ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ಓರ್ವ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಉಳಿದವರ ಕುಟುಂಬದ ಜೊತೆ ಸಮಾಲೋಚನೆ ಮಾಡಿ ಇನ್ನು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಇನ್ನು ಸಿಲಿಂಡರ್ ಸ್ಪೋಟಗೊಂಡ ಸ್ಥಳದಲ್ಲಿ ಇದ್ದ ಮಾಲಾಧಾರಿಗಳಲ್ಲಿ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 5 ಮಾಲಾಧಾರಿಗಳು ಮಾಲೆ ತೆಗೆದಿದ್ದಾರೆ. ಒಟ್ಟು 14 ಮಾಲೆ ಧರಿಸಿ, ಶಬರಿಮಲೈಗೆ ಹೋಗುವ ತಯಾಾರಿ ನಡೆಸಿದ್ದರು. ಆದರೆ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅದರಲ್ಲಿ ಇಬ್ಬರು ಇಂದು ಮೃತಪಟ್ಟಿದ್ದು, ಉಳಿದವರಲ್ಲಿ 5 ಜನ ಮಾಲೆ ತೆಗೆದಿದ್ದಾರೆ.
ಮಂಜುನಾಥ ಜಡಿಮಠ, ಅಕ್ಷಯ್, ಆಕಾಶ್,ಸಂಜು, ಕಲ್ಮೇಶ್ ಮಾಲೆ ತಗೆದ ಮೂಲಾಧಾರಿಗಳಾಗಿದ್ದು, ಸಾವಿನ ಸುದ್ದಿ ಕೇಳಿ, ಮಾಲೆ ತೆಗೆದು, ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.