Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ನಡೆದಿದ್ದ ಯುವತಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ನ್ಯಾಯಲಯವು ಮುಂದೂಡಿದೆ.
ನೇಹಾ ಹಿರೇಮಠ ಹತ್ಯೆ ಆರೋಪಿ ಫಯಾಜ್ ಕೊಂಡುನಾಯ್ಕನ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜುಲೈ 23ಕ್ಕೆ ಮುಂದೂಡಿದೆ. ಮೃತ ನೇಹಾ ಹಿರೇಮಠ ಅವರ ತಾಯಿ ಗೀತಾ ನಿರಂಜನ ಹಿರೇಮಠ ಫಿರ್ಯಾದಿದಾರರು ಆಗಿದ್ದರು. ಸುಪ್ರೀಂಕೋರ್ಟ್ ಆದೇಶದ ಸೆಕ್ಷನ್‌ಗಳ ಪ್ರಕಾರ ಫಿರ್ಯಾದಿದಾರರ ಪರ ಇನ್ನಷ್ಟು ವಕೀಲರು ವಕಾಲತ್ತು ಮಾಡಲು ಅವಕಾಶವಿದೆ.
ವಕೀಲರಾದ ಗುರು ಹಿರೇಮಠ, ಅಶೋಕ ಅಣವೇಕರ ಅವರ ಸಲಹೆ ಸ್ವೀಕರಿಸಲು ಅವಕಾಶ ನೀಡುವಂತೆ ವಕೀಲ ರಾಘವೇಂದ್ರ ಮುತಗೀಕರ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಫಯಾಜ್ ಪರ ವಕೀಲ ಜಡ್.ಎಂ. ಹಕ್ಕರಗಿ ತಕರಾರು ಅರ್ಜಿ ಸಲ್ಲಿಸುವುದಾಗಿ ಹೇಳಿದರು. ಆರೋಪಿ ಪರ ವಕೀಲರಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ ನ್ಯಾಯಾಲಯವು ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದೆ.