Thursday, April 17, 2025

Latest Posts

Ganesh Festival: ಹುಬ್ಬಳ್ಳಿಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ವಿಘ್ನ..!

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಚನ್ನಮ್ಮ(ಈದ್ಗಾ)ಮೈದಾನದಲ್ಲಿ ಹೈಕೋರ್ಟ್ ಆದೇಶದಂತೆ ಯಾವುದೇ ಇನ್ನಿತರ ಧಾರ್ಮಿಕ ಆಚರಣೆಗೆ ಅವಕಾಶ ನೀಡಬಾರದು. ಅದರಂತೆ ಗಣೇಶ ಮೂರ್ತಿ ಕೂಡಿಸಲು ಅನುಮತಿ ನೀಡಬಾರದು. ಇದಲ್ಲದೇ ಹುಬ್ಬಳ್ಳಿಯಲ್ಲಿ ಶಾಂತಿ ಭಂಗ ತರುವ ಪ್ರಮೋದ್ ಮುತಾಲಿಕ್ ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.

ನಗರದಲ್ಲಿಂದು ಈ ಕುರಿತು ಪತ್ರಿಕಾಗೋಷ್ಠಿ ಏರ್ಪಡಿಸಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕ ಡಾ.ವಿಜಯ ಗುಂಟ್ರಾಳ ಮಾತನಾಡಿ, ಈಗಾಗಲೇ ಹುಬ್ಬಳ್ಳಿಯ ದಿವಾಣಿ ನ್ಯಾಯಾಲಯ ಪ್ರಕರಣ ಸಂಖ್ಯೆ ಎ 40/1974 ರ ಅನ್ವಯ ಹುಬ್ಬಳ್ಳಿ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಯಾವುದೇ ಸಾಂಪ್ರದಾಯಿಕ ಹಕ್ಕು ಇರುವುದಿಲ್ಲ ಎಂದು ಆದೇಶ ಮಾಡಿದೆ. ಮುಂದೆ ಆರ್ ಎ 754/1982 ರ ಅನ್ವಯ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿದೆ. ಜತೆಗೆ ಡಿಕ್ರಿಯನ್ನು ಸಹ ಎತ್ತಿ ಹಿಡಿದಿದೆ. ಇದರ ಅನ್ವಯ ಈದ್ಗಾ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಂರಿಗೆ ಪ್ರಾರ್ಥನೆ ನಮಾಜ್ ಸಲ್ಲಿಸಲು ಮತ್ತು ಜನವರಿ 26 ಹಾಗೂ ಅಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶ ನೀಡಲಾಗಿದೆ. ಇದರೊಂದಿಗೆ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರುವುದಿಲ್ಲ ಎಂದು ಹುಬ್ಬಳ್ಳಿಯ ದಿವಾಣಿ ನ್ಯಾಯಾಲಯ ಹಾಗೂ ಹೈಕೋರ್ಟ್ ಜೂನ್ 18 1992 ರಂದು ಆದೇಶ ಮಾಡಿದೆ.

ಅದರಂತೆ ಭಾರತದ ಸರ್ವೋಚ್ಚ ನ್ಯಾಯಾಲಯ 2019 ರಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಎತ್ತಿ ಹಿಡಿದಿದೆ. ಈ ಆಸ್ತಿ ಅಂಜುಮನ್ ಏ ಇಸ್ಲಾಂ ಸಂಸ್ಥೆ ಕಬ್ಜಾದಲ್ಲಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ವಿಷಯದಲ್ಲಿ ತಿರ್ಮಾಣ ತೆಗೆದುಕೊಳ್ಳಲು ಯಾವುದೇ ಅಧಿಕಾರ ಇಲ್ಲದಿದ್ದರು ಸಹ ಕಳೆದ ವರ್ಷ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಹಾಪೌರರು ಹಾಗೂ ಜನಪ್ರತಿನಿಧಿಗಳು ಕಾನೂನು ಬಾಹಿರವಾಗಿ ತೆಗೆದುಕೊಂಡಿರುವ ತೀರ್ಮಾನ ಮತ್ತು ಪ್ರಸ್ತುತ 2023 ಅಗಸ್ಟ್ 31 ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳ ತೀವ್ರ ವಿರೋಧದ ನಡುವೆ ಪುನಃ ಗಣೇಶ ಮೂರ್ತಿ ಕೊಡಿಸಲು ಠರಾವು ಪಾಸ್ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಂದುವರೆದು ಕರ್ನಾಟಕ ಮುನ್ಸಿಪಲ್ ಕಾಯ್ದೆ 1976 ರ ಸೆಕ್ಷನ್ 176 ರ ವಿರುದ್ಧವಾಗಿದೆ. ಮತ್ತು ಕಾನೂನು ಬಾಹಿರವಾಗಿದೆ. ಕರ್ನಾಟಕ ಮುನ್ಸಿಪಲ್ ಕಾಯ್ದೆ 1976 ರ ಸೆಕ್ಷನ್ 60 ರ ವಿರುದ್ದವಾಗಿ ತೀರ್ಮಾನ ತೆಗೆದುಕೊಂಡು ಕೆ.ಎಮ್.ಸಿ ಕಾಯ್ದೆ ಮತ್ತು ಗೌರವಾನ್ವಿತ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಇದೀಗ ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಕೊಡಿಸುತ್ತೇವೆ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಇದಲ್ಲದೇ ಮುಸ್ಲಿಂರಿಗೆ ತಾಕತ್ ಇದ್ದರೇ ತಡೆಯಲಿ ಎಂದು ಕೋಮು ಗಲಭೆ ಹಿಂಸೆಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಇದನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದರು.

ಪ್ರಮೋದ್ ಮುತಾಲಿಕ್ ದೇಶದ ಸಂವಿಧಾನ, ಕಾನೂನು ಹಾಗೂ ಗೌರವಾನ್ವಿತ ನ್ಯಾಯಾಲಯದ ಆದೇಶಗಳ ಬಗ್ಗೆ ಗೌರವ ಇಲ್ಲದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಹು-ಧಾ ಅವಳಿನಗರದಲ್ಲಿ ಸರ್ವ ಧರ್ಮಿಯರು ಕೋಮು ಸಾಮರಸ್ಯ ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಪ್ರಮೋದ್ ಮುತಾಲಿಕ್ ಕೋಮು ಸಾಮರಸ್ಯ ಹಾಳು ಮಾಡಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಶಾಂತಿ ಭಂಗ ಮಾಡುವ ಹುನ್ನಾರ ನಡೆಸಿದ್ದಾರೆ. ಅವರನ್ನು ಕೂಡಲೇ ಪೊಲೀಸ್ ಇಲಾಖೆ ಬಂಧಿಸಿ ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಈ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಒಟ್ಟಿನಲ್ಲಿ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣಪತಿ ಮೂರ್ತಿ ಕೂಡಿಸಲು ಅವಕಾಶ ನೀಡಬಾರದು ಎಂದು ಎಸ್ಡಿಪಿಐ ಪಕ್ಷದಿಂದ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ್ ಕುರಟ್ಟಿ, ಜಿಲ್ಲಾಧ್ಯಕ್ಷ ಮುಕ್ತುಮ ಹೊಸಮನಿ, ಜಿಲ್ಲಾ ಸಮಿತಿಯ ಸದಸ್ಯರಾದ ಮಲೀಕ ಕಳಸ, ಹಮೀದ ಬಂಗಾಲಿ, ಇಮ್ತಿಯಾಜ್ ಬೆಳೆಪಸರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Empty Lake: ಖಾಲಿಯಿರುವ ಕೆರೆ ತುಂಬಿಸಲು ಗ್ರಾಮಸ್ಥರು ಆಗ್ರಹ..!

Police: ದಲಿತರ ಭೂಮಿಯ ಮೇಲೆ ಸವರ್ಣಿಯರಿಗೆ ಯಾಕಿಷ್ಟು ಕಣ್ಣು..!

BEO Clerk: ಬಿಇಒ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ..!ಯಾಕೆ?

- Advertisement -

Latest Posts

Don't Miss