Hubli News: ₹172 ಕೋಟಿ ಕ್ರೀಡಾ ಸಂಕೀರ್ಣಕ್ಕೆ ಇನ್ನೂ ಉದ್ಘಾಟನೆ ಭಾಗ್ಯವಿಲ್ಲ

Hubli News: ಉತ್ತರ ಕರ್ನಾಟಕದ ಕ್ರೀಡಾಪಟುಗಳ ಕನಸಿನ ಯೋಜನೆಯಾಗಿದ್ದ ಹುಬ್ಬಳ್ಳಿಯ ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ₹172 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಬೃಹತ್ ಕ್ರೀಡಾ ಸಂಕೀರ್ಣ ಸಾರ್ವಜನಿಕರ ಬಳಕೆಗೆ ಬಾರದಿರುವುದು ಇದೀಗ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದು ಹುಬ್ಬಳ್ಳಿಯ ಗೋಕುಲ ರಸ್ತೆಯ ಡಾ. ಆರ್.ಎಂ. ಲೋಹಿಯಾ ನಗರದಲ್ಲಿರುವ ಇಂಟಿಗ್ರೇಟೆಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಹಾಗೂ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಂಪನಿಯಿಂದ ₹172 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕ್ರೀಡಾ ಸಂಕೀರ್ಣದ ಕಾಮಗಾರಿ ಶೇ.100ರಷ್ಟು ಪೂರ್ಣಗೊಂಡಿದೆ. ಆದರೆ ವರ್ಷ ಕಳೆದರೂ ಉದ್ಘಾಟನೆ ಮಾತ್ರ ಆಗಿಲ್ಲ. ಪರಿಣಾಮ, ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಬಾಗಿಲು ಮುಚ್ಚಿಕೊಂಡೇ ಉಳಿದಿದೆ.

ಸುಮಾರು 15 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಕ್ರೀಡಾ ಸಂಕೀರ್ಣ ದೇಶದಲ್ಲೇ ಅಪರೂಪದ ಮಾದರಿಯಾಗಿದೆ. ಒಂದೇ ಸೂರಿನಡಿ 16 ಒಳಾಂಗಣ ಹಾಗೂ 6 ಹೊರಾಂಗಣ ಕ್ರೀಡೆಗಳಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಬ್ಯಾಡ್ಮಿಂಟನ್, ಶೂಟಿಂಗ್, ಕುಸ್ತಿ, ಕಬಡ್ಡಿ, ಟೇಬಲ್ ಟೆನಿಸ್, ಈಜುಕೊಳ, ಮಾರ್ಷಲ್ ಆರ್ಟ್ಸ್ ಸೇರಿದಂತೆ ಹಲವು ಕ್ರೀಡೆಗಳ ಜೊತೆಗೆ ಫುಟ್‌ಬಾಲ್, ಹಾಕಿ, ಟೆನಿಸ್, ಖೋ-ಖೋ ಹಾಗೂ ಅಥ್ಲೆಟಿಕ್ಸ್‌ಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಕ್ರೀಡಾ ಸಂಕೀರ್ಣ ಆರಂಭವಾದರೆ ಉತ್ತರ ಕರ್ನಾಟಕ ಮಾತ್ರವಲ್ಲ, ರಾಜ್ಯ ಹಾಗೂ ನೆರೆಯ ರಾಜ್ಯಗಳ ಕ್ರೀಡಾಪಟುಗಳಿಗೂ ಅತ್ಯಾಧುನಿಕ ತರಬೇತಿ ಸೌಲಭ್ಯ ದೊರೆಯಲಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನೂ ಆಯೋಜಿಸುವ ಸಾಮರ್ಥ್ಯ ಈ ಸಂಕೀರ್ಣಕ್ಕಿದೆ. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಮಹತ್ವಾಕಾಂಕ್ಷೆಯ ಯೋಜನೆ ಇನ್ನೂ ಸಾರ್ವಜನಿಕರ ಬಳಕೆಗೆ ಬಂದಿಲ್ಲ.

ಸಾರ್ವಜನಿಕರ ತೆರಿಗೆ ಹಣದಲ್ಲಿ ₹172 ಕೋಟಿ ವೆಚ್ಚ ಮಾಡಿ ನಿರ್ಮಿಸಿರುವ ಕ್ರೀಡಾ ಸಂಕೀರ್ಣ ಉದ್ಘಾಟನೆ ಕಾಣದೆ ಧೂಳು ತಿನ್ನುತ್ತಿರುವುದು ವಿಪರ್ಯಾಸವಾಗಿದೆ. ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾದ ಈ ಯೋಜನೆಯನ್ನು ಶೀಘ್ರ ಉದ್ಘಾಟಿಸಿ, ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ಸಮರ್ಪಿಸಬೇಕೆಂಬ ಒತ್ತಾಯ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳಿಂದ ಕೇಳಿಬರುತ್ತಿದೆ.

About The Author