Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಕೇವಲ ವ್ಯಾಪಾರ ವಹಿವಾಟಿನಿಂದಾಗಿ ಚೋಟಾ ಬಾಂಬೆ ಎಂಬ ಹೆಸರು ಗಳಿಸಿದೆ. ಆದರೆ, ಇಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ಹಾಗೂ ಅಮರ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ದೇಗುಲಗಳು ಇವೆ. ಅವುಗಳಲ್ಲಿ ಹುಬ್ಬಳ್ಳಿಯ ಉಣಕಲ್ನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನ ಕೂಡ ಒಂದು. ಇಂತಹ ಪ್ರಖ್ಯಾತ ದೇವಾಲಯಕ್ಕೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಭೇಟಿ ನೀಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ಸ್ಟಾ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡ ನಟಿ: ಸಾರಾ ಅಲಿ ಖಾನ್ ಅವರು ದೇವಾಲಯಕ್ಕೆ ಭೇಟಿ ನೀಡಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಸ್ಟೋರಿಯ ಸ್ಕ್ರೀನ್ ಶಾಟ್ ಅನ್ನು ಹುಬ್ಬಳ್ಳಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ನಟಿ ಸಾರಾ ಹುಬ್ಬಳ್ಳಿಯ ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡಿದ್ದಕ್ಕೆ ಮೆಚ್ಚುಗೆ ಸೂಚಿಸಿದ ಶಾಸಕ:
ಜೊತೆಗೆ “ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ಹಾಗೂ ಅಮರ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಶಿವ ಭಕ್ತೆಯಾದ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಭೇಟಿ ನೀಡಿದ ವಿಷಯ ತಿಳಿದು ಸಂತೋಷವಾಗಿದೆ. ಇಂತಹ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿಗೆ ಸೆಲೆಬ್ರಿಟಿಗಳು ಭೇಟಿ ನೀಡಿದಾಗ ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಎಲ್ಲೆಡೆ ಪಸರಿಸುವುದಲ್ಲದೇ, ನಮ್ಮ ನಗರವು ಪ್ರವಾಸಿ ತಾಣವಾಗಿ ಬಿಂಬಿತಗೊಳ್ಳುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ” ಎಂದು ಅಭಿನಂದನೆಯ ಮಾತುಗಳನ್ನು ಬರೆದುಕೊಂಡಿದ್ದಾರೆ.
ನಟಿಯ ಫೋಸ್ಟ್ ಶೇರ್ ಮಾಡಿರುವ ಶಾಸಕ ಟೆಂಗಿನಕಾಯಿ: ಮಹೇಶ್ ಟೆಂಗಿನಕಾಯಿ ಅವರು ಶೇರ್ ಮಾಡಿಕೊಂಡಿರುವ ಫೇಸ್ಬುಕ್ ಫೋಟೋಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಆದರೆ, ಸಾರಾ ಅಲಿ ಖಾನ್ ಅವರು ಯಾವಾಗ ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಯಾವ ಕಾರಣಕ್ಕೆ ಹುಬ್ಬಳ್ಳಿಗೆ ಬಂದಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.