Hubli News: ಶಿರಗುಪ್ಪಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಂಬ್ಯುಲೆನ್ಸ್ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದ ಕಾರಣ ಬಡ ಕುಟುಂಬಗಳು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಿರಗುಪ್ಪಿ, ಮನಕವಾಡ, ಮಂಟೂರು, ಬಂಡಿವಾಡ, ನಾಗರಹಳ್ಳಿ, ಇಂಗಳಹಳ್ಳಿ, ನೆಲವಡಿ, ಉಮಚಗಿ ಸೇರಿದಂತೆ ಹತ್ತುಕ್ಕೂ ಹೆಚ್ಚು ಗ್ರಾಮಗಳ ಜನರು ತುರ್ತು ಆರೋಗ್ಯ ಸೇವೆಗಳ ಕೊರತೆಯಿಂದ ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರೂ ವೈದ್ಯರು ಸಮಯಕ್ಕೆ ಲಭ್ಯವಾಗುವುದಿಲ್ಲ ಹಾಗೂ ಸಿಬ್ಬಂದಿಯಿಂದ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದರ ನಡುವೆಯೇ ತುರ್ತು ಪರಿಸ್ಥಿತಿಯಲ್ಲಿ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೆ ಹುಬ್ಬಳ್ಳಿ, ಅಣ್ಣಿಗೇರಿ ಅಥವಾ ಕುಂದಗೋಳದಿಂದ ವಾಹನ ಬರಬೇಕಾಗಿರುವುದರಿಂದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಶ್ರೀಮಂತ ಕುಟುಂಬಗಳಿಗೆ ಖಾಸಗಿ ಕಾರು ಹಾಗೂ ಇತರೆ ವಾಹನಗಳ ವ್ಯವಸ್ಥೆ ಇರುವುದರಿಂದ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪಲು ಸಾಧ್ಯವಾಗುತ್ತದೆ. ಆದರೆ ಬಡ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳಿಗೆ ಅಂತಹ ಸೌಲಭ್ಯಗಳಿಲ್ಲ.
ಹೀಗಾಗಿ ಅವರು ಸರ್ಕಾರಿ ಆಂಬ್ಯುಲೆನ್ಸ್ ಸೇವೆಯನ್ನೇ ಸಂಪೂರ್ಣವಾಗಿ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಅಪಘಾತ, ಹೃದಯಾಘಾತ, ಗರ್ಭಿಣಿಯರ ತುರ್ತು ಚಿಕಿತ್ಸೆ ಸೇರಿದಂತೆ ಗಂಭೀರ ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ವಿಳಂಬವಾದರೆ ಜೀವಕ್ಕೆ ಏನು ಬೇಕಾದರೂ ಆಗಬಹುದು ಎಂಬ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಸರ್ಕಾರ ಆರೋಗ್ಯ ಸೇವೆಗಳಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅವುಗಳ ಪ್ರಯೋಜನ ಗ್ರಾಮೀಣ ಜನರಿಗೆ ತಲುಪುತ್ತಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ. ಯಾವುದೇ ದುರಂತ ಸಂಭವಿಸುವ ಮುನ್ನವೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶಿರಗುಪ್ಪಿ ಭಾಗಕ್ಕೆ ಶಾಶ್ವತ 108 ಆಂಬ್ಯುಲೆನ್ಸ್ ವ್ಯವಸ್ಥೆ, ಅಗತ್ಯ ವೈದ್ಯರು ಹಾಗೂ ತುರ್ತು ಆರೋಗ್ಯ ಸೇವೆಗಳನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.




