Hubli News: ಕೆಲಸಕ್ಕೆ ಬರುವ ಯುವತಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಫೋಟೋ ಸ್ಟುಡಿಯೋ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿರುವ ಘಟನೆ ಹುಬ್ಬಳ್ಳಿಯ ದಿವಟೆ ಓಣಿಯಲ್ಲಿ ನಡೆದಿದೆ. ಈ ಸಂಬಂಧ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ದಿವಟೆ ಓಣಿಯಲ್ಲಿರುವ ಫೋಟೋ ಸ್ಟುಡಿಯೋದಲ್ಲಿ ನಡೆದ ಮಾತಿನ ಚಕಮಕಿಯೊಂದು ಚಾಕು ಇರಿತದವರೆಗೆ ತಲುಪಿದೆ. ಫೋಟೋ ಸ್ಟುಡಿಯೋ ಮಾಲೀಕ ಕಿರಣ ಹಬೀಬ್, 27 ವರ್ಷ, ಎಂಬಾತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನೇಕಾರನಗರ ನಿವಾಸಿ ವೆಂಕಟೇಶ ಎಂಬಾತ ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಕಿರಣ ಹಬೀಬ್ ಸಲುಗೆಯಿಂದ ಮಾತನಾಡುತ್ತಿದ್ದುದನ್ನು ಕಂಡ ಆರೋಪಿ ಆಕ್ರೋಶಗೊಂಡಿದ್ದಾನೆ ಎನ್ನಲಾಗಿದೆ.
ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ “ಆಕೆಗೆ ದಾರಿ ತಪ್ಪಿಸಿದ್ದೀಯಾ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡ ಕಿರಣ ಹಬೀಬ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




