Hubli News: ಪಡಿತರ ಅಕ್ಕಿ ಗುಣಮಟ್ಟ ಹೆಚ್ಚಳಕ್ಕೆ ಕೇಂದ್ರದ ನಿರ್ಧಾರ

Hubli News: ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಪಡಿತರ ಅಕ್ಕಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇನ್ನು ಮುಂದೆ ಪಡಿತರ ಅಕ್ಕಿಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ವಿತರಿಸುವ ಅಕ್ಕಿಯ ಪ್ರಮಾಣದಲ್ಲಿ ಯಾವುದೇ ಕಡಿತ ಮಾಡದೆ, ಅದರ ಗುಣಮಟ್ಟವನ್ನು ಮಾತ್ರ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ದೇಶದ 80 ಕೋಟಿಗೂ ಅಧಿಕ ಅರ್ಹ ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಧಾನ್ಯ ತಲುಪಿಸುವ ಗುರಿ ಹೊಂದಲಾಗಿದೆ.

ಹೊಸ ಮಾನದಂಡದ ಪ್ರಕಾರ, ಕಚ್ಚಾ ಅಕ್ಕಿಯಲ್ಲಿ (Raw Rice) ಈ ಹಿಂದೆ ಶೇ.25ರಷ್ಟು ಇದ್ದ ನುಚ್ಚಿನ ಪ್ರಮಾಣವನ್ನು ಶೇ.10ಕ್ಕೆ ಇಳಿಸಲಾಗಿದೆ. ಅದೇ ರೀತಿ ಬೇಯಿಸಿದ ಅಕ್ಕಿಯಲ್ಲಿ (Parboiled Rice) ಶೇ.16ರಷ್ಟು ಇದ್ದ ನುಚ್ಚಿನ ಪ್ರಮಾಣವನ್ನು ಶೇ.5ಕ್ಕೆ ಇಳಿಸಲಾಗಿದೆ. ಇದರಿಂದ ಫಲಾನುಭವಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಗಟ್ಟಿತನ ಮತ್ತು ಉತ್ತಮ ಗುಣಮಟ್ಟದ ಅಕ್ಕಿ ದೊರೆಯಲಿದೆ.

ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಕ್ಯೂಆರ್ ಕೋಡ್ ಆಧಾರಿತ ವ್ಯವಸ್ಥೆಯನ್ನು ಕೂಡ ಜಾರಿಗೊಳಿಸಲಾಗುತ್ತಿದೆ. ಇದರಿಂದ ಆಹಾರ ಧಾನ್ಯದ ಪೂರೈಕೆ ಪ್ರಕ್ರಿಯೆಯನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದ್ದು, ಅಕ್ರಮಗಳಿಗೆ ಕಡಿವಾಣ ಬೀಳುವ ಜೊತೆಗೆ ದಾಸ್ತಾನು ಹಾಗೂ ವಿತರಣಾ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಾಗಲಿದೆ.

ಈ ಹೊಸ ವ್ಯವಸ್ಥೆಯಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಗುಣಮಟ್ಟ ಸುಧಾರಿಸುವುದರ ಜೊತೆಗೆ, ಲಾಜಿಸ್ಟಿಕ್ಸ್ ಮತ್ತು ಆಡಳಿತಾತ್ಮಕ ವೆಚ್ಚವೂ ಕಡಿಮೆಯಾಗಲಿದ್ದು, ಸರ್ಕಾರಕ್ಕೆ ವಾರ್ಷಿಕ ಸುಮಾರು 2,161 ಕೋಟಿ ರೂಪಾಯಿ ಉಳಿತಾಯವಾಗುವ ನಿರೀಕ್ಷೆಯಿದೆ. ಉಳಿಯುವ ನುಚ್ಚಿನ ಅಕ್ಕಿಯನ್ನು ಆಹಾರ ಸಂಸ್ಕರಣೆ ಹಾಗೂ ಪಶು ಆಹಾರಕ್ಕೆ ಬಳಸುವ ಮೂಲಕ ಸಂಪನ್ಮೂಲಗಳ ಸದ್ಬಳಕೆಯನ್ನೂ ಖಚಿತಪಡಿಸಲಾಗುತ್ತಿದೆ. ಒಟ್ಟಾರೆ, ಪಡಿತರ ಅಕ್ಕಿಯ ಪ್ರಮಾಣವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡು, ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಫಲಾನುಭವಿಗಳಿಗೆ ಉತ್ತಮ ಆಹಾರ ಭದ್ರತೆ ಒದಗಿಸುವ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ.

About The Author