Hubli News: ಜೈನ ಅಭಿವೃದ್ಧಿ ನಿಗಮಕ್ಕೆ ಆಗ್ರಹ – ಮುನಿಗಳಿಗೆ ಕಾಂಗ್ರೆಸ್ ನಿಯೋಗ ಮನವಿ

Hubli News: ಜೈನ ಸಮುದಾಯದ ಬೇಡಿಕೆ ಈಡೇರಿಕೆಗೆ ಹತ್ತು ದಿನಗಳ ಗಡುವು ನೀಡಿ ದೇಹತ್ಯಾಗ ಹೋರಾಟದ ಎಚ್ಚರಿಕೆ ನೀಡಿದ್ದ ಗುಣಧರಾನಂದಿ ಮಹಾರಾಜರನ್ನು ಕಾಂಗ್ರೆಸ್ ನಾಯಕರ ನಿಯೋಗ ಭೇಟಿಯಾಗಿ ಮನವಿ ಮಾಡಿದೆ. ಹೋರಾಟದ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿರುವ ನಾಯಕರು, ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ.

ಜೈನ ಸಮುದಾಯದ ಬೇಡಿಕೆಗಳಿಗೆ ಹತ್ತು ದಿನಗಳ ಗಡುವು..!

ಬೇಡಿಕೆ ಈಡೇರದಿದ್ದರೆ ಸುವರ್ಣ ವಿಧಾನಸೌಧದ ಎದುರು ದೇಹತ್ಯಾಗ ಹೋರಾಟದ ಎಚ್ಚರಿಕೆ..!

ಗುಣಧರಾನಂದಿ ಮಹಾರಾಜರ ಈ ಎಚ್ಚರಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರದ ಮಟ್ಟದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಸೂಚನೆಯಂತೆ ಕಾಂಗ್ರೆಸ್ ನಾಯಕರ ನಿಯೋಗ ವರೂರು ನವಗ್ರಹ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿ ಮಹಾರಾಜರನ್ನು ಭೇಟಿಯಾಗಿದೆ.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸದಾನಂದ ಡಂಗನವರ್, ಗ್ರಾಮೀಣ ಘಟಕದ ಅಧ್ಯಕ್ಷ ಚಂದ್ರಶೇಖರ ಜುಟಲ್ ಹಾಗೂ ಜೈನ ಸಮಾಜದ ಮುಖಂಡ ಮಹೇಂದ್ರ ಸಿಂಘಿ ಅವರು ಮಹಾರಾಜರೊಂದಿಗೆ ಚರ್ಚಿಸಿ, ದೇಹತ್ಯಾಗದಂತಹ ಕಠಿಣ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.

ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಸಮುದಾಯದ ಐದು ಪ್ರಮುಖ ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರ ಆದಷ್ಟು ಶೀಘ್ರ ಸ್ಪಂದಿಸುವಂತೆ ಪ್ರಯತ್ನಿಸಲಾಗುವುದು ಎಂದು ನಿಯೋಗ ಭರವಸೆ ನೀಡಿದೆ.

ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕು. ಹೋರಾಟದ ಕಠಿಣ ನಿರ್ಧಾರವನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ನಾಯಕರು ಮನವರಿಕೆ ಮಾಡಿದ್ದಾರೆ.

ಮಹಾರಾಜರು ಬಹಳ ದಿನಗಳಿಂದ ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಸಮುದಾಯದ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಆದರೆ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ದೇಹತ್ಯಾಗದ ಎಚ್ಚರಿಕೆ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಸಚಿವ ಸಂತೋಷ ಲಾಡ್ ಅವರ ಸೂಚನೆಯಂತೆ ಭೇಟಿ ಮಾಡಿ ಚರ್ಚಿಸಲಾಗಿದೆ. ಸರ್ಕಾರಕ್ಕೆ ಕಾಲಾವಕಾಶ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸದಾನಂದ ಡಂಗನವರ್ ತಿಳಿಸಿದ್ದಾರೆ.

ಒಂದೆಡೆ ಜೈನ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಮಹಾರಾಜರ ಪಟ್ಟು.. ಮತ್ತೊಂದೆಡೆ ಹೋರಾಟದ ನಿರ್ಧಾರ ಕೈಬಿಡುವಂತೆ ಕಾಂಗ್ರೆಸ್ ನಾಯಕರ ಮನವಿ..!

ಈಗ ಸರ್ಕಾರಕ್ಕೆ ಕಾಲಾವಕಾಶ ನೀಡುವಂತೆ ನಿಯೋಗ ಮನವಿ ಮಾಡಿದೆ. ಆದರೆ ಹತ್ತು ದಿನಗಳ ಗಡುವಿನೊಳಗೆ ಜೈನ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದೇ ಸದ್ಯದ ಕುತೂಹಲ.

ಕ್ಯಾಮೆರಾ ಪರ್ಸನ್ ಹೇಮಂತ್ ಕುಮಾರ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author