Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ತಾರಿಹಾಳ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಹೈ ಅಲರ್ಟ್ ಘೋಷಿಸಲಾಗಿದೆ. ಆದ್ರೆ, ಭದ್ರತೆಯ ಹೆಸರಿನಲ್ಲಿ ರಸ್ತೆಗಳಿಗೆ ಮೊಳೆ ಹೊಡೆದು ಹಾಳು ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.
ಇದೀಗ ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹುಬ್ಬಳ್ಳಿಯ ತಾರಿಹಾಳ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಹುಬ್ಬಳ್ಳಿಯ ಸಿಎಆರ್ ಮೈದಾನದ ಮುಂಭಾಗದ ರಸ್ತೆಯ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಆದರೆ, ಬ್ಯಾರಿಕೇಡ್ ಅಳವಡಿಸುವುದಕ್ಕಾಗಿ ರಸ್ತೆಗೆ ಮೊಳೆ ಹೊಡೆದು ರಸ್ತೆ ಹಾಳು ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಈಗಾಗಲೇ ಸಂಚಾರ ದಟ್ಟಣೆ ಹಾಗೂ ರಸ್ತೆ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ, ರಸ್ತೆ ಹಾಳು ಮಾಡುತ್ತಿರುವ ಆರೋಪ ಮತ್ತೊಂದು ಆತಂಕ ತಂದಿದೆ.
ಒಟ್ಟಿನಲ್ಲಿ, ರೈತರ ಹೋರಾಟದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭದ್ರತೆ ಹೆಚ್ಚಿಸಿದ್ದು, ಪ್ರತಿಭಟನೆ ಶಾಂತಿಯುತವಾಗಿ ನಡೆಯುವುದರ ಜೊತೆಗೆ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.




