Hubli News: ಹೆಸರಷ್ಟೇ ಬದಲಾವಣೆ, ಸಂಸ್ಥೆಯ ಸ್ಥಿತಿಗತಿ ಬದಲಾಗುತ್ತಾ?

Hubli News: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮರುನಾಮಕರಣಕ್ಕೆ ಕೊನೆಗೂ ಸರ್ಕಾರದ ಅಧಿಕೃತ ಮುದ್ರೆ ಬಿದ್ದಿದೆ. ನಾಲ್ಕೈದು ವರ್ಷಗಳಿಂದ ಕೇಳಿಬರುತ್ತಿದ್ದ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ಇನ್ಮುಂದೆ ಸಂಸ್ಥೆ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂದು ಗುರುತಿಸಿಕೊಳ್ಳಲಿದೆ. ಆದರೆ ಹೆಸರಿನ ಬದಲಾವಣೆಗೆ ಬರೋಬ್ಬರಿ 10 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇಷ್ಟೊಂದು ಹಣ ಖರ್ಚು ಮಾಡಿ ಹೆಸರು ಬದಲಿಸುವುದರಿಂದ ಸಂಸ್ಥೆಯ ಅಭಿವೃದ್ಧಿಗೆ ಏನು ಲಾಭ? ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ನಾಲ್ಕೈದು ವರ್ಷಗಳ ಬೇಡಿಕೆಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರು ಬದಲಾವಣೆಗೆ ಸರ್ಕಾರ ಆದೇಶ ಹೊರಡಿಸಿದೆ. ಇನ್ಮುಂದೆ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೊಸ ಹೆಸರಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ.

2021ರಲ್ಲೇ ಕನ್ನಡಪರ ಹೋರಾಟಗಾರರು ಈ ಭಾಗದ ಸಾರಿಗೆ ಸಂಸ್ಥೆಗೆ ವಾಯವ್ಯ ಕರ್ನಾಟಕದ ಹೆಸರು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಬಳಿಕ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರು ಈ ಬೇಡಿಕೆಗೆ ಅಧಿಕೃತ ರೂಪ ನೀಡಿದ್ದರು. 2025ರ ಫೆಬ್ರವರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮರುನಾಮಕರಣದ ಕುರಿತು ಠರಾವು ಅಂಗೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಆದೇಶ ಹೊರಡಿಸಿದ್ದು, ಬಹುವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ಆರಂಭದಲ್ಲಿ ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರನ್ನು ಇಡಲು ಚರ್ಚೆ ನಡೆದಿತ್ತು. ಆದರೆ ಇಂಗ್ಲಿಷ್‌ನಲ್ಲಿ ಕೆಕೆಆರ್‌ಟಿಸಿ ಎಂಬ ಸಂಕ್ಷಿಪ್ತ ಹೆಸರು ಈಗಾಗಲೇ ಇರುವ ಕೆಆರ್‌ಟಿಸಿಯೊಂದಿಗೆ ಗೊಂದಲಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಈ ಪ್ರಸ್ತಾಪ ಕೈಬಿಡಲಾಯಿತು. ಬಳಿಕ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಹಾಗೂ ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರುಗಳ ಕುರಿತು ಚರ್ಚೆ ನಡೆದು, ಕೊನೆಗೆ ಸರ್ಕಾರ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರನ್ನು ಅಧಿಕೃತಗೊಳಿಸಿದೆ.

ಆದರೆ ಹೆಸರು ಬದಲಾವಣೆಯ ಸಂಭ್ರಮದ ನಡುವೆ ವೆಚ್ಚದ ಹೊರೆ ಕೂಡ ಸಂಸ್ಥೆಯ ಮುಂದಿದೆ. ಮರುನಾಮಕರಣ ಪ್ರಕ್ರಿಯೆಗೆ ಅಂದಾಜು 10 ಕೋಟಿ ರೂಪಾಯಿ ಖರ್ಚಾಗಲಿದೆ. ಈ ವೆಚ್ಚವನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದಲೇ ಭರಿಸಬೇಕಿದೆ. ಸಂಸ್ಥೆಯ 5,200 ಬಸ್‌ಗಳ ಮೇಲಿನ ಹೆಸರು ಹಾಗೂ ಲೋಗೋ ಬದಲಾವಣೆ, 176 ಬಸ್ ನಿಲ್ದಾಣಗಳು, 9 ವಿಭಾಗ ಕಚೇರಿಗಳು, 58 ಘಟಕಗಳು, ಕಾರ್ಯಾಗಾರಗಳು ಸೇರಿದಂತೆ ವಿವಿಧ ಕಟ್ಟಡಗಳ ನಾಮಫಲಕ ಬದಲಾವಣೆ ಮಾಡಬೇಕಿದೆ.

ಇಷ್ಟೇ ಅಲ್ಲ, ಬಸ್ ಟಿಕೆಟ್, ವೇಬಿಲ್, ಸೀಲ್, ಫೈಲ್, ರಿಜಿಸ್ಟರ್ ಸೇರಿದಂತೆ ಸಾವಿರಾರು ದಾಖಲೆಗಳು ಮತ್ತು ಪರಿಕರಗಳ ಮೇಲೂ ಹೊಸ ಹೆಸರು ಮುದ್ರಣವಾಗಬೇಕಿದೆ. ಈ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಆರರಿಂದ ಎಂಟು ತಿಂಗಳು ಬೇಕಾಗಬಹುದು.

ಒಟ್ಟಿನಲ್ಲಿ ಸಂಸ್ಥೆಗೆ ಹೊಸ ಹೆಸರು ಸಿಕ್ಕಿದೆ. ಆದರೆ ಸಂಸ್ಥೆ ಎದುರಿಸುತ್ತಿರುವ ಆರ್ಥಿಕ ಸವಾಲುಗಳು, ಬಸ್‌ಗಳ ನಿರ್ವಹಣೆ, ಪ್ರಯಾಣಿಕರಿಗೆ ಉತ್ತಮ ಸೇವೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಂತಹ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ. ಹೆಸರು ಬದಲಾವಣೆಗೆ 10 ಕೋಟಿ ರೂಪಾಯಿ ವೆಚ್ಚ ಮಾಡುವ ಸಂಸ್ಥೆ, ಅದೇ ಸಂಪನ್ಮೂಲವನ್ನು ಪ್ರಯಾಣಿಕರ ಅನುಕೂಲಕ್ಕೆ ಬಳಸಿದ್ದರೆ ಹೆಚ್ಚಿನ ಪ್ರಯೋಜನವಾಗುತ್ತಿತ್ತೇ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಹೆಸರು ಬದಲಾವಣೆಯಷ್ಟೇ ಅಲ್ಲ, ಸಂಸ್ಥೆಯ ಕಾರ್ಯಕ್ಷಮತೆಯಲ್ಲೂ ಬದಲಾವಣೆ ಬರಬೇಕಿದೆ.

ಕ್ಯಾಮೆರಾ ಪರ್ಸನ ಹೇಮಂತ್ ಜೋತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author