Hubli news: ರೈತರು ಹಾಗೂ ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಹೆಸ್ಕಾಂ ವಿಶೇಷ ಕ್ರಮ ಕೈಗೊಂಡಿದೆ. ವಿದ್ಯುತ್ ಪರಿವರ್ತಕಗಳು ಅಂದರೆ ಟಿಸಿಗಳು ಕೆಟ್ಟುಹೋದ ತಕ್ಷಣವೇ ಬದಲಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 3 ಲಕ್ಷದ 46 ಸಾವಿರಕ್ಕೂ ಅಧಿಕ ಟಿಸಿಗಳು ಕಾರ್ಯನಿರ್ವಹಿಸುತ್ತಿದ್ದು, 3,100 ಟಿಸಿಗಳನ್ನು ಮುಂಗಡವಾಗಿ ದಾಸ್ತಾನು ಇರಿಸಲಾಗಿದೆ. ಟಿಸಿ ನಿರ್ವಹಣೆ ಮತ್ತು ದುರಸ್ತಿಗೆ ಹೆಸ್ಕಾಂ ಕೈಗೊಂಡಿರುವ ಕ್ರಮಗಳೇನು? ಇಲ್ಲಿದೆ ವರದಿ.
ವಿದ್ಯುತ್ ಪರಿವರ್ತಕಗಳು ಕೆಟ್ಟುಹೋದರೆ ರೈತರು ಹಾಗೂ ಗ್ರಾಹಕರು ವಿದ್ಯುತ್ ವ್ಯತ್ಯಯದಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ರೈತರ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡರೆ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಮನಗಂಡಿರುವ ಹೆಸ್ಕಾಂ, ಟಿಸಿಗಳ ನಿರ್ವಹಣೆ ಮತ್ತು ದುರಸ್ತಿಗೆ ವಿಶೇಷ ಆದ್ಯತೆ ನೀಡಿದೆ.
ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಒಟ್ಟು 3 ಲಕ್ಷದ 46 ಸಾವಿರದ 900ಕ್ಕೂ ಅಧಿಕ ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿವರ್ಷ ಸುಮಾರು 20 ಸಾವಿರ ಹೊಸ ಟಿಸಿಗಳನ್ನು ವಿದ್ಯುತ್ ವಿತರಣಾ ಜಾಲಕ್ಕೆ ಸೇರ್ಪಡೆ ಮಾಡಲಾಗುತ್ತಿದೆ.
2026-27ನೇ ಸಾಲಿನಲ್ಲಿ 30 ಸಾವಿರದ 866 ಟಿಸಿಗಳು ವಿಫಲವಾಗಿದ್ದು, ಅವುಗಳ ಬದಲಿಗೆ ಹೊಸ ಪರಿವರ್ತಕಗಳನ್ನು ಅಳವಡಿಸಲಾಗಿದೆ. ಜೊತೆಗೆ 31 ಸಾವಿರದ 608 ಟಿಸಿಗಳನ್ನು ದುರಸ್ತಿಗೊಳಿಸಿ ಮರುಬಳಕೆಗೆ ಸಿದ್ಧಪಡಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 750 ಟಿಸಿಗಳನ್ನು ದುರಸ್ತಿಗೊಳಿಸಿ ಹೆಚ್ಚುವರಿಯಾಗಿ ದಾಸ್ತಾನು ಮಾಡಲಾಗಿದೆ.
ಇನ್ನು ಟಿಸಿ ಕೆಟ್ಟುಹೋದಾಗ ತಕ್ಷಣವೇ ಬದಲಾಯಿಸುವ ಉದ್ದೇಶದಿಂದ ಏಳು ಜಿಲ್ಲೆಗಳ ವಿವಿಧೆಡೆ 26 ಟಿಸಿ ಬ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ. ಸದ್ಯ 3,100 ಪರಿವರ್ತಕಗಳನ್ನು ಮುಂಗಡವಾಗಿ ದಾಸ್ತಾನು ಇರಿಸಲಾಗಿದ್ದು, ಬೆಳಗಾವಿಯಲ್ಲಿ 931, ಬಾಗಲಕೋಟೆಯಲ್ಲಿ 532, ವಿಜಯಪುರದಲ್ಲಿ 451, ಉತ್ತರ ಕನ್ನಡದಲ್ಲಿ 376, ಹಾವೇರಿಯಲ್ಲಿ 311, ಧಾರವಾಡದಲ್ಲಿ 253 ಹಾಗೂ ಗದಗ ಜಿಲ್ಲೆಯಲ್ಲಿ 202 ಟಿಸಿಗಳನ್ನು ಸಿದ್ಧವಾಗಿಡಲಾಗಿದೆ.
ಟಿಸಿಗಳ ದುರಸ್ತಿ ಮತ್ತು ಮರುಬಳಕೆಗಾಗಿ ವಿವಿಧ ತಾಲೂಕುಗಳಲ್ಲಿ 57 ದುರಸ್ತಿ ಕೇಂದ್ರಗಳು, ಹುಬ್ಬಳ್ಳಿಯಲ್ಲಿ ಎರಡು ಹಾಗೂ ಬೆಳಗಾವಿಯಲ್ಲಿ ಒಂದು ಬೃಹತ್ ದುರಸ್ತಿ ಕೇಂದ್ರ ಸೇರಿದಂತೆ ಒಟ್ಟು 60 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಮತ್ತೊಂದೆಡೆ ಟಿಸಿ ವೈಫಲ್ಯದ ಕುರಿತು ಗ್ರಾಹಕರು ದೂರು ದಾಖಲಿಸಲು ಉಚಿತ ಸಹಾಯವಾಣಿ 1800-425-4754 ಆರಂಭಿಸಲಾಗಿದೆ. ದೂರು ಸ್ವೀಕರಿಸಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿವರ್ತಕ ಬದಲಾವಣೆಗೆ ಕ್ರಮ ಕೈಗೊಳ್ಳಲಿದ್ದಾರೆ. ವಿಶೇಷವಾಗಿ ರೈತರ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತ್ವರಿತವಾಗಿ ಸ್ಪಂದಿಸಿ ಟಿಸಿ ಬದಲಾಯಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೆಸ್ಕಾಂ ತಿಳಿಸಿದೆ.
ಒಟ್ಟಿನಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ, ಮುಂಗಡ ದಾಸ್ತಾನು ಹಾಗೂ ತ್ವರಿತ ಬದಲಾವಣೆಯ ಮೂಲಕ ರೈತರು ಮತ್ತು ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಗುರಿಯನ್ನು ಹೆಸ್ಕಾಂ ಹೊಂದಿದೆ. ಆದರೆ, ಈ ವ್ಯವಸ್ಥೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




