Hubli News: ಬುಡರಶಿಂಗಿ ಸರ್ಕಾರಿ ಶಾಲೆ ಮುಚ್ಚುವಿಕೆಗೆ ವಿರೋಧ

Hubli News: ಹುಬ್ಬಳ್ಳಿ ತಾಲೂಕಿನ ಬುಡರಶಿಂಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಹೆಸರಲ್ಲಿ ವಿಲೀನಗೊಳಿಸಿ ಮುಚ್ಚಲು ಮುಂದಾಗಿರುವುದನ್ನು ವಿರೋಧಿಸಿ, ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಾಲೆಯನ್ನು ಉಳಿಸಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ ತಾಲೂಕಿನ ಬುಡರಶಿಂಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಹೆಸರಲ್ಲಿ ಮುಚ್ಚುತ್ತಿರುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಶರಣಬಸವ ಗೋನವಾರ ಮಾತನಾಡಿ, ಅದರಗುಂಚಿಯಲ್ಲಿ ಕೆಪಿಎಸ್ ಶಾಲೆ ಆರಂಭಿಸಿ ಬುಡರಶಿಂಗಿ ಶಾಲೆಯನ್ನು ಅದಕ್ಕೆ ವಿಲೀನ ಮಾಡಲು ಸರ್ಕಾರ ಮುಂದಾಗಿದೆ.

ಬಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅವರ ಸಮುದಾಯದ ನಡುವೆಯೇ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆಯಂತಹ ಮಹನೀಯರು ಹೋರಾಟ ನಡೆಸಿದ್ದರು. ಅದರ ಫಲವಾಗಿ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳು ಸ್ಥಾಪನೆಯಾಗಿವೆ. ಆದರೆ ಈಗ ಸರ್ಕಾರವೇ ಶಾಲೆಗಳನ್ನು ಮುಚ್ಚುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು.

ಸಮಿತಿ ಅಧ್ಯಕ್ಷ ಮಂಜುನಾಥ ಕಟಗಿ ಮಾತನಾಡಿ, ಬುಡರಶಿಂಗಿ ಗ್ರಾಮದಲ್ಲಿ ಇರುವ ಏಕೈಕ ಶಾಲೆಯೇ ಇದಾಗಿದ್ದು, ಇದನ್ನು ಮುಚ್ಚಿದರೆ ಮಕ್ಕಳನ್ನು ಅದರಗುಂಚಿಗೆ ಕಳುಹಿಸಬೇಕಾಗುತ್ತದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ದಾಟಿ ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಲಿದ್ದು, ಯಾವುದೇ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಶಾಲೆ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಬಳಿಕ ಶಾಲೆ ಉಳಿಸುವ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗ್ರಾಮಸ್ಥರು ಹಾಗೂ ಶಿಕ್ಷಣ ಹೋರಾಟಗಾರರು ಸೇರಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯನ್ನು ರಚಿಸಿದರು.

About The Author