Hubli News: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ರಕ್ಷಾಬಂಧನ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗೋಕುಲ ರಸ್ತೆಯ ವಾಸವಿ ನಗರದ ವಾಸವಿ ಮಹಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಪರಸ್ಪರ ರಕ್ಷೆ ಕಟ್ಟಿಕೊಂಡರು.
ಹುಬ್ಬಳ್ಳಿಯ ಗೋಕುಲ ರಸ್ತೆಯ ವಾಸವಿ ನಗರದ ವಾಸವಿ ಮಹಲ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿ ಮಹಾನಗರ ಘಟಕದಿಂದ ರಕ್ಷಾಬಂಧನ ಉತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿ ರಕ್ಷೆ ಕಟ್ಟಿಸಿಕೊಂಡು ರಕ್ಷಾಬಂಧನ ಆಚರಿಸಿದರು.
ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ರಾಜ್ಯಸಭಾ ಸದಸ್ಯ ಎಂ. ನಾಗರಾಜ್, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ್, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು. ಇದೇ ವೇಳೆ ನಾಯಕರು ಪರಸ್ಪರ ರಕ್ಷೆ ಕಟ್ಟಿಕೊಂಡು ರಕ್ಷಾಬಂಧನದ ಶುಭಾಶಯ ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಭವಾನಿ ಫಾರ್ಮಾಸುಟಿಕಲ್ಸ್ ಮಾಲೀಕ ಮನೋಹರ ಬಾಕಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಪ್ರಾಂತ ಸಹಬೌದ್ಧಿಕ ಪ್ರಮುಖ ರಾಮಚಂದ್ರ ಏಕಡೆ ಸೇರಿದಂತೆ ಹಿರಿಯ ಸ್ವಯಂಸೇವಕರು ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
ರಕ್ಷಾಬಂಧನದ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕರ್ತರು ಹಾಗೂ ಗಣ್ಯರು ಪರಸ್ಪರ ರಕ್ಷೆ ಕಟ್ಟಿಕೊಂಡು ಸಹೋದರತ್ವ ಮತ್ತು ಸಾಮಾಜಿಕ ಬಾಂಧವ್ಯದ ಸಂದೇಶ ಸಾರಿದರು. ಹುಬ್ಬಳ್ಳಿ ಮಹಾನಗರ ಘಟಕದ ರಕ್ಷಾಬಂಧನ ಉತ್ಸವ ಸಂಭ್ರಮದಿಂದ ನೆರವೇರಿತು.
