Hubli News: ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗಾಳಿಯ ಅಬ್ಬರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ಮರದ ಕೊಂಬೆ ನೆಲಕ್ಕುರುಳಿದ ಘಟನೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ ಮತ್ತು ಗಾಳಿಯಿಂದ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು. ಭಾರಿ ಮಳೆಯ ಪರಿಣಾಮ ದಾಜಿಬಾನಪೇಟೆ ಸೇರಿದಂತೆ ನಗರದ ಹಲವು ತಗ್ಗು ಪ್ರದೇಶಗಳ ರಸ್ತೆಗಳು ಹಾಗೂ ಅಂಡರ್ಬ್ರಿಡ್ಜ್ಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಇದೇ ವೇಳೆ, ಮಳೆಗಾಳಿಯ ಅಬ್ಬರಕ್ಕೆ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಸಮೀಪ ಇರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿದ್ದ ಮರದ ಕೊಂಬೆ ಮುರಿದು ನೆಲಕ್ಕುರುಳಿತು. ಮರದ ಕೊಂಬೆ ಅಲ್ಲೇ ನಿಂತಿದ್ದ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದು, ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಳೆ ಕಡಿಮೆಯಾಗುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮರದ ಕೊಂಬೆ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಭಾರಿ ಮಳೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದ ದೃಶ್ಯಗಳು ನಗರದಲ್ಲಿ ಕಂಡುಬಂದವು.




