Hubli News: ಸೂರ್ಯಕಾಂತಿ ಬೆಂಬಲ ಬೆಲೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ

Hubli News: ಹುಬ್ಬಳ್ಳಿಯಲ್ಲಿ ಸೋಮವಾರದಂದು ಕಬ್ಬು ಬೆಳೆಗಾರ ರೈತರಿಂದ ಹೋರಾಟದ ರಣಕಹಳೆ ಮೊಳಗಿದ ಬೆನ್ನಲ್ಲೇ, ಇದೀಗ ಸೂರ್ಯಕಾಂತಿ ಬೆಳೆಗಾರರ ಪರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧ್ವನಿ ಎತ್ತಿದ್ದಾರೆ. ಕರ್ನಾಟಕದ ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆ ಯೋಜನೆ ಜಾರಿಗೆ ತರುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.

ಹೌದು, ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರಿಗೆ ಬೆಂಬಲ ಬೆಲೆ ಯೋಜನೆ ಜಾರಿಗೆ ತರಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿರುವ ಜೋಶಿ, ರಾಜ್ಯದ ಸೂರ್ಯಕಾಂತಿ ಬೆಳೆಗೆ PSS—ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಖರೀದಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

2026-27ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಅಂದಾಜು 0.87 ಲಕ್ಷ ಮೆಟ್ರಿಕ್ ಟನ್ ಸೂರ್ಯಕಾಂತಿ ಬೆಳೆ ನಿರೀಕ್ಷಿಸಲಾಗಿದ್ದು, ರಾಜ್ಯದಲ್ಲಿ ಸೂರ್ಯಕಾಂತಿ ಪ್ರಮುಖ ಬೆಳೆಯಾಗಿದೆ. ಪ್ರಸ್ತುತ ಸೂರ್ಯಕಾಂತಿ ಪ್ರತಿ ಕ್ವಿಂಟಾಲ್‌ಗೆ ಸುಮಾರು 8,343 ರೂಪಾಯಿ ದರದಲ್ಲಿ ವಹಿವಾಟಾಗುತ್ತಿದೆ. ಇದು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಎಂದು ಜೋಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ಸೂರ್ಯಕಾಂತಿ ಬೆಳೆ ಮಾರುಕಟ್ಟೆಗೆ ಬರುವ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಮಾರುಕಟ್ಟೆ ಬೆಲೆ ಮತ್ತಷ್ಟು ಕುಸಿಯುವ ಆತಂಕ ರೈತರಲ್ಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ಹಿತದೃಷ್ಟಿಯಿಂದ PSS ಯೋಜನೆ ಜಾರಿಗೆ ತಂದು ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಸುವಂತೆ ಕೇಂದ್ರ ಕೃಷಿ ಸಚಿವರಿಗೆ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.

About The Author