Hubli News: ಮತದಾರರ ಪಟ್ಟಿ ವಿಚಾರ: ರಾಹುಲ್ ಗಾಂಧಿ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಜೋಶಿ, ಪತ್ತೆಯಾಗದ ಮತದಾರರನ್ನು ಟ್ರೇಸ್ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಎಂದು ಹೇಳಿದ್ದಾರೆ. ಇದೇ ವೇಳೆ ಕಬ್ಬು ಬೆಳೆಗಾರರ ಸಭೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಈ ಹಿಂದೆ ಸೋತಾಗ ಮತದಾರರ ಪಟ್ಟಿ ಶುದ್ಧೀಕರಣವಾಗಬೇಕು ಎಂದು ಹೇಳಿದ್ದರು. ಇದೀಗ ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. 13 ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಅದರಲ್ಲಿ ಸುಮಾರು 3 ಕೋಟಿ ಜನರು ಪತ್ತೆಯಾಗದವರಾಗಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಎಆರ್‌ಒ, ತಹಶೀಲ್ದಾರ್ ಹಾಗೂ ಡಿಸಿ ಯಾರು? ಅವರೆಲ್ಲರೂ ರಾಜ್ಯ ಸರ್ಕಾರದ ಅಧಿಕಾರಿಗಳೇ. ಹಾಗಿದ್ದರೆ ಪತ್ತೆಯಾಗದ ಮತದಾರರನ್ನು ಮನೆ ಮನೆಗೆ ತೆರಳಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಿ ಎಂದು ಜೋಶಿ ಹೇಳಿದ್ದಾರೆ. ಯಾರು ಬೇಕಾದರೂ ದೇಶದಲ್ಲಿ ಮತದಾರರಾಗಲು ಸಾಧ್ಯವಿಲ್ಲ. ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಬಂದವರು ಕಾನೂನುಬದ್ಧವಾಗಿ ಮತದಾರರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸತತ ಸೋಲಿನಿಂದ ಹತಾಶರಾಗಿರುವ ರಾಹುಲ್ ಗಾಂಧಿ, ತಮ್ಮ ಸೋಲಿಗೆ ತಮ್ಮದೇ ಪಕ್ಷದ ಕಾರ್ಯವೈಖರಿಯ ಬದಲು ಚುನಾವಣೆ ಆಯೋಗವನ್ನು ಹೊಣೆ ಮಾಡುತ್ತಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ. ಚುನಾವಣೆ ಆಯೋಗವೂ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದೆ. ವಿವಿಧ ಇಲಾಖೆಗಳಲ್ಲಿರುವಂತೆ ಚುನಾವಣಾ ಆಯೋಗದಲ್ಲೂ ಹಲವು ಅಭಿಪ್ರಾಯಗಳ ಬಳಿಕ ಒಮ್ಮತದ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋತಿಲ್ಲ, ಬಿಜೆಪಿ ಕೂಡ ಸೋತಿಲ್ಲ. ಕಾಂಗ್ರೆಸ್ ಏನೇ ಆರೋಪ ಮಾಡಿದರೂ ದೇಶದ ಜನರು ಪ್ರಧಾನಿ ಮೋದಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಇನ್ನು ಕಬ್ಬು ಬೆಳೆಗಾರರ ಸಭೆ ವಿಚಾರವಾಗಿ ಮಾತನಾಡಿದ ಜೋಶಿ, ಎಲ್ಲಾ ಸಮಸ್ಯೆಗಳನ್ನು ಒಬ್ಬರೇ ಬಗೆಹರಿಸಲು ಸಾಧ್ಯವಿಲ್ಲ. ವಿವಿಧ ಸಚಿವಾಲಯಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಸೇರಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ರೈತರ ಸಭೆ ಕರೆಯಲಾಗಿದ್ದು, ರೈತರು ಸಭೆಯಲ್ಲಿ ಭಾಗವಹಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

About The Author