Hubli News: ಮಾಂಜಾ ದಾರಕ್ಕೆ ಮಹಿಳೆ ಬಲಿ: ಸರ್ಕಾರ, ಪೊಲೀಸರ ವಿರುದ್ಧ ಶಾಸಕ ಟೆಂಗಿನಕಾಯಿ

Hubli News: ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಟೆಂಗಿನಕಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಷೇಧವಿದ್ದರೂ ಮಾಂಜಾ ದಾರ ಜನರ ಕೈಗೆ ಹೇಗೆ ಸಿಗುತ್ತಿದೆ ಎಂದು ಪ್ರಶ್ನಿಸಿರುವ ಅವರು, ಮಾಂಜಾ ದಾರ ಮಾರಾಟಗಾರರ ಮೇಲೆ ದಾಳಿ ನಡೆಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಕೇವಲ ಒಂದೆರಡು ಕಡೆ ಪರಿಶೀಲನೆ ನಡೆಸಿದರೆ ಸಾಲದು, ಸಂಪೂರ್ಣವಾಗಿ ಮಾಂಜಾ ದಾರದ ಬಳಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಮಾಂಜಾ ದಾರಕ್ಕೆ ಬಲಿಯಾದ ವಿದ್ಯಾ ಮಂಜುನಾಥ ಗೌಡರ ಅವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಮಾಂಜಾ ದಾರದಿಂದ ಈಗಾಗಲೇ ಹಲವಾರು ಜೀವಹಾನಿಗಳು ಸಂಭವಿಸಿದ್ದು, ಇದೀಗ ಮತ್ತೊಂದು ದುರಂತ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಂದು ಮಾಂಜಾ ದಾರ ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಈ ಕೂಡಲೇ ಸರ್ಕಾರ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಮಾಂಜಾ ದಾರ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ನಿಷೇಧವಿದ್ದರೂ ಮಾಂಜಾ ದಾರ ಜನರ ಕೈಗೆ ಹೇಗೆ ಸಿಗುತ್ತಿದೆ ಎಂಬುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಎರಡು ಕಡೆ ಪರಿಶೀಲನೆ ನಡೆಸಿದರೆ ಸಾಲದು, ರಾಜ್ಯದಲ್ಲಿ ಸಂಪೂರ್ಣವಾಗಿ ಮಾಂಜಾ ದಾರದ ಬಳಕೆಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ತಾನೂ ಮಾತನಾಡುವುದಾಗಿ ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.

ಮಾಂಜಾ ದಾರಕ್ಕೆ ಮತ್ತೊಂದು ಜೀವ ಬಲಿಯಾದ ಬೆನ್ನಲ್ಲೇ, ಅದರ ಮಾರಾಟ ಮತ್ತು ಬಳಕೆಗೆ ಸಂಪೂರ್ಣ ಕಡಿವಾಣ ಹಾಕಬೇಕೆಂಬ ಒತ್ತಾಯ ಹೆಚ್ಚಾಗಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

About The Author