ಮಂಡ್ಯ ಕೈಗಾರಿಕೆ ಕುರಿತಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Mandya News: ಮಂಡ್ಯ ಜಿಲ್ಲೆಯಲ್ಲಿ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪಿಸಲು ಕರ್ನಾಟಕ ಸರ್ಕಾರದಿಂದ ಕಳೆದ ಹತ್ತು ತಿಂಗಳಿನಿಂದ ಭೂಮಿ ಮಂಜೂರಾತಿಯಲ್ಲಿ ವಿಳಂಬವಾಗಿರುವ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಗುರುವಾರ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಈವರೆಗೆ ಕೈಗಾರಿಕೆ ಸ್ಥಾಪನೆ ಕುರಿತಂತೆ ನಡೆದಿರುವ ಸಭೆಗಳು, ರಾಜ್ಯ ಮತ್ತು ಕೇಂದ್ರ ನಡುವೆ ಆಗಿರುವ ಪತ್ರ ವ್ಯವಹಾರಗಳು, ವಿವಿಧ ಸಭೆಗಳ ನಡಾವಳಿಗಳು ಹಾಗೂ ಇನ್ನಿತರ ಮಹತ್ವದ ದಾಖಲೆಗಳನ್ನು ಲಗತ್ತಿಸಿ ಮುಖ್ಯಮಂತ್ರಿ ಕಚೇರಿಗೆ ಪತ್ರವನ್ನು ಕಳಿಸಿದ್ದಾರೆ. ಪತ್ರ ಜೊತೆಗೆ ಆ ಎಲ್ಲಾ ದಾಖಲೆಗಳನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಅಲ್ಲದೆ ಮಂಡ್ಯದಲ್ಲಿ ARAI ಕೇಂದ್ರ ಸ್ಥಾಪನೆ ಕುರಿತುಂತೆ ಕೋರಲಾಗಿರುವ ಭೂ ಮಂಜೂರಾತಿಗೆ ಸಂಬಂಧಿಸಿದ ಮುಖ್ಯಮಂತ್ರಿ ಡಿಕೆಶಿ ಅವರು ನೀಡಿರುವ ಹೇಳಿಕೆಗಳ ಪತ್ರಿಕಾ ತುಣುಕುಗಳನ್ನು ಕೂಡ ಪತ್ರಕ್ಕೆ ಲಗತ್ತಿಸಿ ಕೇಂದ್ರ ಸಚಿವರು ರವಾನಿಸಿದ್ದಾರೆ.

ಮಹತ್ವದ ಈ ಪತ್ರವನ್ನು ಕೇಂದ್ರ ಸಚಿವರ ಆಪ್ತರು ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ. ಪತ್ರ ತಲುಪಿದ ನಂತರ ಸ್ವತಃ ಹೆಚ್.ಡಿ. ಕುಮಾರಸ್ವಾಮಿ ಅವರು ತುಷಾರ್ ಗಿರಿನಾಥ್ ಅವರೊಂದಿಗೆ ಚರ್ಚಿಸಿದರು.

ಸಚಿವರ ಪತ್ರದ ಸಾರಾಂಶ ಹೀಗಿದೆ;

‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ವತಿಯಿಂದ ಪ್ರಸ್ತಾಪಿಸಲಾಗಿರುವ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪನೆಗಾಗಿ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರದಿಂದ ಕಳೆದ 10 ತಿಂಗಳಿನಿಂದ ಉಂಟಾಗಿರುವ ನಿರಂತರ ವಿಳಂಬದತ್ತ ನಾನು ತಮ್ಮ ಗಮನ ಸೆಳೆಯಲು ಬಯಸುತ್ತೇನೆ.

ಕಳೆದ 10 ತಿಂಗಳುಗಳಿಂದ ನಾವು ನಿರಂತರವಾಗಿ ಈ ಬಗ್ಗೆ ರಾಜ್ಯ ಸರ್ಕಾರದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ. ಸ್ಥಳ ಪರಿಶೀಲನೆ, ತಾಂತ್ರಿಕ ಮೌಲ್ಯಮಾಪನ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಈ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದೇವೆ. ಇಷ್ಟೆಲ್ಲಾ ನಿರಂತರ ಪ್ರಯತ್ನಗಳ ಹೊರತಾಗಿಯೂ, ಸೂಕ್ತ ಭೂಮಿಯನ್ನು ಮಂಜೂರು ಮಾಡುವ ವಿಷಯವು ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (KIADB) ಇನ್ನೂ ಭೂಮಿ ಮಂಜೂರಾತಿ ಇತ್ಯರ್ಥಗೊಂಡಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪನೆಗಾಗಿ ಯೋಜನೆಗೆ ಜಾಗ ಗುರುತಿಸುವ ನಿಟ್ಟಿನಲ್ಲಿ ARAI (Automotive Research Association of India) ನಿರಂತರ ತ್ವರಿತಗತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ.

ದಿನಾಂಕ: 16-03-2026ರಂದು ARAI ಸಂಸ್ಥೆಯ ತಂಡವು ಮಂಡ್ಯ ತಾಲೂಕಿನ ಬಸರಾಳು, ಮಂಡ್ಯ ಸಕ್ಕರೆ ಕಾರ್ಖಾನೆ ಮತ್ತು ಕೆ.ಆರ್.ಪೇಟೆ ಕೈಗಾರಿಕಾ ವಲಯದಲ್ಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ತದನಂತರ ಭೂಮಿ ಮಂಜೂರಾತಿ ವಿಚಾರವಾಗಿ ಮಂಡ್ಯದ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಈ ವಿಷಯವಾಗಿ ದಿನಾಂಕ: 17-03-2026 ರಂದು ವಿಕಾಸಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಲಾಗಿದೆ.

ದಿನಾಂಕ: 20-03-2026 ರಂದು ARAI ಸಂಸ್ಥೆಗೆ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ವಿವರವಾದ ತಾಂತ್ರಿಕ ಅಗತ್ಯಗಳ ಮಾಹಿತಿಯನ್ನು ಕೂಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುತ್ತದೆ. ನಾನು ದಿನಾಂಕ: 13-04-2026 ರಂದು ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ಅವರೊಂದಿಗೆ ಸಭೆಯನ್ನು ನಡೆಸಿ ಮಂಡ್ಯ ಜಿಲ್ಲೆಯಲ್ಲಿ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ (CIE Test Centre) ಹಾಗೂ ‘ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ’ (EV Test Centre) ಸ್ಥಾಪಿಸುವ ಯೋಜನೆಯ ವಿಸ್ತೃತ ವಿವರ ಹಾಗೂ ಭೂಮಿ ಅಗತ್ಯತೆಯ ಕುರಿತು ವಿವರವಾಗಿ ಚರ್ಚಿಸಲಾಗಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿರುತ್ತದೆ.

ಈ ರೀತಿಯಾಗಿ ಸಿಎಂ ಡಿ.ಕೆ.ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

About The Author