Hubli News: ಇಪಿಎಫ್ ನಿಯಮ ಬದಲಾವಣೆಗೆ ಮಹಿಳಾ ಕಾರ್ಮಿಕರ ಹೋರಾಟ

Hubli News: ಇಪಿಎಫ್ ನಿಯಮ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ಗಾರ್ಮೆಂಟ್ ಮಹಿಳಾ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಸತತ ಎರಡು ದಿನಗಳಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಮಿಕರು, ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಸಾವಿರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರಿಂದ ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.

ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದ ಮಹಿಳಾ ಕಾರ್ಮಿಕರು… ಇಪಿಎಫ್ ನಿಯಮ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡದ ನವಲೂರು ರೈಲು ನಿಲ್ದಾಣದ ಬಳಿ ಇರುವ ಶಾಹಿ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಎದುರು ಸಾವಿರಾರು ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದ್ರು. ಬೆಳಗ್ಗೆಯಿಂದಲೇ ಗಾರ್ಮೆಂಟ್ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಮಿಕರು, ರಸ್ತೆ ಮೇಲೆಯೇ ಕುಳಿತು ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ರು.

ಇಎಸ್‌ಐ, ಪಿಎಫ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ತಾವು ಕಷ್ಟಪಟ್ಟು ದುಡಿಯುತ್ತಿರುವ ಹಣ ತಮ್ಮ ಕೈ ಸೇರಬೇಕು ಎಂದು ಒತ್ತಾಯಿಸಿದ ಮಹಿಳಾ ಕಾರ್ಮಿಕರು, ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದ್ರು. ಕಾರ್ಮಿಕರ ಪ್ರತಿಭಟನೆಯಿಂದ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು, ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿದ್ರು. ಪ್ರತಿಭಟನಾ ನಿರತ ಮಹಿಳಾ ಕಾರ್ಮಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಪರಿಸ್ಥಿತಿ ಕೈಮೀರುವುದನ್ನು ತಡೆಯಲು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮಹಿಳಾ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ರು. ರಸ್ತೆ ತಡೆ ಕೈಬಿಟ್ಟು ಪ್ರತಿಭಟನೆಯನ್ನು ಬೇರೆ ರೀತಿಯಲ್ಲಿ ಮುಂದುವರಿಸುವಂತೆ ಮನವಿ ಮಾಡಿದ್ರು.

ಆದ್ರೆ ಅಧಿಕಾರಿಗಳ ಮನವೊಲಿಕೆಗೆ ಕಾರ್ಮಿಕರು ಜಗ್ಗಲಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ನಾವು ಕಷ್ಟಪಟ್ಟು ದುಡಿದ ಹಣ ನಮಗೆ ಕೊಡಬೇಕು ಎಂದು ಕಾರ್ಮಿಕರು ಪಟ್ಟು ಹಿಡಿದ್ರು. ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ನಂತರ ಸ್ಥಳಕ್ಕೆ ಎಡಿಸಿ ಗೀತಾ ಸೇರಿದಂತೆ ಅಧಿಕಾರಿಗಳು ಆಗಮಿಸಿ ಪ್ರತಿಭಟನಾ ನಿರತ ಮಹಿಳಾ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ರು. ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಮನವೊಲಿಕೆ ನಡೆಸಿದ್ರು.

ಇತ್ತ ಪ್ರೈವೇಟ್ ಫಂಡ್ ರಿಜಿನಲ್ ಕಮಿಷನರ್ ರಮಣ ಗುಪ್ತಾ ಕೂಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಹಿಳಾ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ರು. ಕಾರ್ಮಿಕರ ಬೇಡಿಕೆ ಹಾಗೂ ಇಪಿಎಫ್ ವಿಚಾರವಾಗಿ ಮನವೊಲಿಸುವ ಪ್ರಯತ್ನ ನಡೆಸಿದ್ರು.

ಅಧಿಕಾರಿಗಳ ನಿರಂತರ ಮನವೊಲಿಕೆ ಬಳಿಕ ಪ್ರತಿಭಟನೆಯನ್ನು ಮುಗಿಸಿ ಮಹಿಳಾ ಕಾರ್ಮಿಕರನ್ನು ಗಾರ್ಮೆಂಟ್ ಒಳಗೆ ಕಳುಹಿಸಲಾಯಿತು. ಆದ್ರೆ ಕೆಲ ಮಹಿಳಾ ಕಾರ್ಮಿಕರು ಮತ್ತೆ ರಸ್ತೆಗೆ ಇಳಿದು ಪ್ರತಿಭಟನೆ ಮುಂದುವರಿಸಲು ಮುಂದಾದ್ರು. ಈ ವೇಳೆ ಪೊಲೀಸರು ಅವರನ್ನು ನಿಯಂತ್ರಿಸಲು ಮುಂದಾಗಿ, ಕೆಲ ಮಹಿಳಾ ಕಾರ್ಮಿಕರನ್ನು ವಶಕ್ಕೆ ಪಡೆದ್ರು.

ಹೀಗೆ ಇಪಿಎಫ್ ನಿಯಮ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನಗಳಿಂದ ನಡೆಯುತ್ತಿರುವ ಮಹಿಳಾ ಕಾರ್ಮಿಕರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಮಹಿಳಾ ಕಾರ್ಮಿಕರು ಸ್ಪಷ್ಟಪಡಿಸಿದ್ದಾರೆ.

ಕ್ಯಾಮೆರಾ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author