Hubli Political News: ಚುನಾವಣಾ ಆಯೋಗ ದೆಹಲಿಯಲ್ಲಿ ಇದ್ದರೂ ಆಯಾ ರಾಜ್ಯಗಳಲ್ಲಿ ಚುನಾವಣೆ ನಡೆಸಬೇಕಾದದ್ದು ಅಲ್ಲಿನ ರಾಜ್ಯ ಸರ್ಕಾರ. 2024ರಲ್ಲಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಈ ಸರ್ಕಾರದ ಅಧಿಕಾರಿಗಳೇ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಈ ಸಾಮಾನ್ಯ ಜ್ಞಾನ ರಾಹುಲ್ ಗಾಂಧಿಗೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲೂ ತಪ್ಪು ಮತಗಳಿರುತ್ತವೆ. ಒಂದೇ ಮನೆಯಲ್ಲಿ 10, 100 ಮತ, ಒಂದೇ ಮತ ಎರಡು ಕ್ಷೇತ್ರದಲ್ಲಿ ಇರುತ್ತವೆ. ಒಬ್ಬರ ಮತ ಹಲವು ಬಡಾವಣೆಯಲ್ಲಿ ಇರುತ್ತವೆ. ಇದನ್ನು ತಪ್ಪಿಸಲೆಂದೇ ಆಧಾರ್ ಲಿಂಕ್ ಮಾಡಬೇಕು ಎಂದು ಹೇಳಲಾಗಿತ್ತು. ಅದಕ್ಕೆ ಕಾಂಗ್ರೆಸ್ ಸರ್ಕಾರ ಒಪ್ಪದೇ ಸುಪ್ರೀಂನಲ್ಲಿ ಗದ್ದಲ ಮಾಡಿತು. ಈಗ ಬಿಹಾರದಲ್ಲಿ ಇದೇ ರೀತಿ ನಕಲಿ ಮತ ಸ್ವಚ್ಛ ಮಾಡುವ ಕೆಲಸ ಮಾಡಿದರೆ ರಾಹುಲ್ ಗಾಂಧಿ ಅದನ್ನು ಮಾಡಬೇಡಿ ಎನ್ನುತ್ತಿದ್ದಾರೆ.
ಆ ತಪ್ಪು ಆಗಿದ್ದು ಇವರದ್ದೇ ಸರ್ಕಾರದಿಂದ. ಮಹದೇವಪುರ ಅಷ್ಟೇ ಏಕೆ? ಅದರ ಪಕ್ಕದ ಶಿವಾಜಿನಗರದ ಬಗ್ಗೆ ಇವರು ಧ್ವನಿ ಎತ್ತುತ್ತಿಲ್ಲ. ಸರ್ವಜ್ಞ ನಗರ, ಜಮೀರ್ ಅಹ್ಮದ್ ಕ್ಷೇತ್ರ ಇದೆ ಅದರ ಬಗ್ಗೆಯೂ ರಾಹುಲ್ ಮಾತನಾಡಬೇಕು. ಆಧಾರ ಇಲ್ಲದೇ ಸುಮ್ಮನೆ ಮಾತನಾಡೋದಲ್ಲ. ಈ ಬಗ್ಗೆ ಅರವಿಂದ ಲಿಂಬಾವಳಿ ಅವರು ಅಂಕಿ, ಸಂಖ್ಯೆ ಮೂಲಕ ಉತ್ತರ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಚುನಾವಣಾ ಸ್ಟಂಟ್ ತರ ಮಾಡಲು ಹೊರಟಿದ್ದಾರೆ. ಅವರಿಗೆ ಈ ರೀತಿಯ ಕೆಲಸ ಮಾಡಿ ಎಂದು ಯಾರೋ ಎನ್‌ಜಿಓದವರು ಹೇಳಿದ್ದಾರೆ. ಅದರಂತೆ ರಾಹುಲ್ ಈ ರೀತಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜನರಿಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡಿದರೆ ಎಲ್ಲರೂ ಸ್ಪಂದನೆ ಮಾಡುತ್ತಾರೆ. ಈ ರೀತಿಯ ನಿರಾಧಾರ ಆರೋಪ ಮಾಡಿದರೆ ಯಾರೂ ಒಪ್ಪುವುದಿಲ್ಲ ಎಂದರು.




