Political News: ಬೆಂಗಳೂರು ಸೇರಿ ಹಲವೆಡೆ ಫುಟ್‌ಪಾತ್ ತೆರವಿಗೆ ನೋಟೀಸ್ ಜಾರಿಯಾಗಿದ್ದು, ಕೆಲವೆಡೆ ನೋಟೀಸ್ ನೀಡದೇ ತೆರವು ಮಾಡಲಾಗ್ತಿದೆ ಮತ್ತು ಪುನರ್ವಸತಿ ಜಾಗ ನೀಡದೇ ಫುಟ್‌ಪಾತ್ ತೆರವು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಆರೋಪಕ್ಕೆ ಸಂಬಂದಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಫುಟ್‌ಪಾತ್ ಅಲ್ಲ… ಇದು ಕಾಂಗ್ರೆಸ್ ಸರ್ಕಾರದ ‘ಆಪರೇಷನ್ ಬಡವರ ಹೊಟ್ಟೆ’! ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಇದೇನಾ ನಿಮ್ಮ ಬಡವರ ಪರವಾದ ಆಡಳಿತ? ದೊಡ್ಡ ದೊಡ್ಡ ಒತ್ತುವರಿದಾರರ ಎದುರು ಮಂಡಿಯೂರುವ ನಿಮ್ಮ ಸರ್ಕಾರ, ದಿನಗೂಲಿ ನೆಚ್ಚಿಕೊಂಡು ಬದುಕುವ ಬೀದಿಬದಿ ವ್ಯಾಪಾರಿಗಳ ಮೇಲೆ ಮಾತ್ರ ಶೌರ್ಯ ಪ್ರದರ್ಶಿಸುತ್ತಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೋಟಿಸ್ ಇಲ್ಲ… ಪರ್ಯಾಯ ಸ್ಥಳವಿಲ್ಲ… ಟೌನ್ ವೆಂಡಿಂಗ್ ಸಮಿತಿಯೇ ಇಲ್ಲ… ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲ… ಅಧಿಕೃತ ಗುರುತಿನ ಚೀಟಿ ತೋರಿಸಿದರೂ ದಯೆಯಿಲ್ಲ! ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಮಾನವೀಯತೆ ಅನ್ನೋದೇ ಇಲ್ಲವೇ? ಮಲ್ಲೇಶ್ವರ, ವಿಜಯನಗರ, ಶಾಂತಿನಗರ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಬಡ ವ್ಯಾಪಾರಿಗಳಿಗೆ ತಮ್ಮ ಸಾಮಗ್ರಿಗಳನ್ನು ತೆರವುಗೊಳಿಸಲು ಎರಡು ಗಂಟೆಯ ಅವಕಾಶವನ್ನೂ ನೀಡದೆ ಜೀವನೋಪಾಯವನ್ನೇ ಕಸಿದುಕೊಳ್ಳಲಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರ “ರೀಲ್ಸ್” ಹೇಳಿಕೆಗಳಿಗೂ, “ರಿಯಾಲಿಟಿ”ಯಲ್ಲಿ ಜಿಬಿಎ ನಡೆಸುತ್ತಿರುವ ದೌರ್ಜನ್ಯಕ್ಕೂ ಸಂಬಂಧವಿಲ್ಲದಂತಾಗಿದೆ. ದೊಡ್ಡ ದೊಡ್ಡ ಒತ್ತುವರಿದಾರರ ಮುಂದೆ ಮಂಡಿಯೂರುವ ಈ ಸರ್ಕಾರ, ದಿನಗೂಲಿ ನೆಚ್ಚಿಕೊಂಡಿರುವ ಬಡ ವ್ಯಾಪಾರಿಗಳ ಮೇಲೆ ಪ್ರತಾಪ ತೋರಿಸುತ್ತಿರುವುದು ಹೇಯ ಕೃತ್ಯ.
ಸಚಿವರಿಗೆ ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲವೇ? ಅಥವಾ ಬಡವರ ಮೇಲೆ ನಡೆಯುತ್ತಿರುವ ಅನ್ಯಾಯಕ್ಕೆ ಅವರ ಮೌನ ಸಮ್ಮತಿಯೇ? ಫುಟ್ಪಾಥ್ ತೆರವು ಹೆಸರಿನಲ್ಲಿ ಬಡವರ ಹೊಟ್ಟೆಗೆ ಹೊಡೆಯುವುದನ್ನು ತಕ್ಷಣ ನಿಲ್ಲಿಸಿ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1.) ಮೊದಲು ನಿಯಮದಂತೆ Town Vending Committee ರಚಿಸಿ.
2.) ಕಾನೂನುಬದ್ಧವಾಗಿ ಮಾರಾಟ ವಲಯಗಳನ್ನು (Vending Zones) ಗುರುತಿಸಿ.
3.) ಬಡ ವ್ಯಾಪಾರಿಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ.
ಅದರ ನಂತರವಷ್ಟೇ ಮುಂದಿನ ಯಾವುದೇ ಕ್ರಮ ಕೈಗೊಳ್ಳಿ! ಬಡವರ ಮೇಲೆ ನಿಮ್ಮ ‘ಬುಲ್ಡೋಜರ್’ ಆಡಳಿತ ತೋರಿಸುವುದು ಸುಲಭ. ಧೈರ್ಯವಿದ್ದರೆ ಅಕ್ರಮ ಎಸಗುತ್ತಿರುವ ಪ್ರಭಾವಿ ಕಟ್ಟಡ ಮಾಫಿಯಾ ಹಾಗೂ ಬೃಹತ್ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.




