Hubli: ಸಾರಿಗೆ ಸಂಸ್ಥೆಯ ಮರುನಾಮಕರಣ – ಹೊಸ ಹೆಸರಿನಲ್ಲಿ ಕರ್ನಾಟಕ ಮಾಯ, ಸಾರ್ವಜನಿಕರ ಆಕ್ರೋಶ

Hubli News: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮರುನಾಮಕರಣಕ್ಕೆ ಕೊನೆಗೂ ರಾಜ್ಯ ಸರ್ಕಾರದ ಅಧಿಕೃತ ಮುದ್ರೆ ಬಿದ್ದಿದೆ. ನಾಲ್ಕೈದು ವರ್ಷಗಳಿಂದ ಕೇಳಿಬರುತ್ತಿದ್ದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಆದರೆ ಹೊಸ ಹೆಸರಿನಲ್ಲಿ ಕರ್ನಾಟಕ ಎಂಬ ಪದವೇ ಮಾಯವಾಗಿದೆ. ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಿರುವುದಕ್ಕೆ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಕರ್ನಾಟಕದ ಹೆಸರನ್ನೇ ಕೈಬಿಡುವ ಅಗತ್ಯವೇನಿತ್ತು ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಹಾಗಾದರೆ ಮರುನಾಮಕರಣದ ಹಿಂದಿನ ಇತಿಹಾಸವೇನು? ಯಾವೆಲ್ಲ ಹೆಸರುಗಳ ಬಗ್ಗೆ ಚರ್ಚೆ ನಡೆದಿತ್ತು? ಇಲ್ಲಿದೆ ಸಂಪೂರ್ಣ ವರದಿ.

ಇದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರ ಸಾರಿಗೆ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಈ ಸಂಸ್ಥೆಯ ಹೆಸರನ್ನು ಬದಲಾಯಿಸಬೇಕೆಂಬ ಬೇಡಿಕೆ ಇಂದಿನದಲ್ಲ. 2021ರಿಂದಲೇ ಕನ್ನಡಪರ ಹೋರಾಟಗಾರರು ಸಂಸ್ಥೆಗೆ ಹೊಸ ಹೆಸರು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು.

ಈ ಬೇಡಿಕೆಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರು ಅಧಿಕೃತ ರೂಪ ನೀಡಿದರು. ಸುಮಾರು ಎರಡು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಮರುನಾಮಕರಣದ ಪ್ರಸ್ತಾವನೆ ಸಲ್ಲಿಸಿದ್ದರು. ಬಳಿಕ 2025ರ ಫೆಬ್ರವರಿಯಲ್ಲಿ ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಮರುನಾಮಕರಣದ ಕುರಿತು ಠರಾವು ಅಂಗೀಕರಿಸಿ, ಸರ್ಕಾರಕ್ಕೆ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಹಲವು ವರ್ಷಗಳ ಚರ್ಚೆ ಹಾಗೂ ಮನವಿಗಳ ಬಳಿಕ ಇದೀಗ ಸರ್ಕಾರ ಮರುನಾಮಕರಣಕ್ಕೆ ಅಧಿಕೃತ ಆದೇಶ ಹೊರಡಿಸಿದೆ.

ಆದರೆ ಮರುನಾಮಕರಣದ ಪ್ರಕ್ರಿಯೆಯಲ್ಲಿ ಹೊಸ ಹೆಸರಿನ ಆಯ್ಕೆಯೇ ಈಗ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರನ್ನು ಪರಿಗಣಿಸಲಾಗಿತ್ತು. ಆದರೆ ಇದರ ಇಂಗ್ಲಿಷ್ ಸಂಕ್ಷಿಪ್ತ ರೂಪ KKR T C ಆಗುವುದರಿಂದ, ಈಗಾಗಲೇ ಇರುವ ಕೆಎಸ್‌ಆರ್‌ಟಿಸಿ ಹೆಸರಿನೊಂದಿಗೆ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಅನುದಾನ ಹಂಚಿಕೆ ಹಾಗೂ ಆಡಳಿತಾತ್ಮಕ ವ್ಯವಹಾರಗಳಲ್ಲಿಯೂ ಗೊಂದಲ ಉಂಟಾಗಬಹುದು ಎಂಬ ಕಾರಣಕ್ಕೆ ಈ ಹೆಸರಿನ ಬದಲಿಗೆ ಪರ್ಯಾಯ ಹೆಸರುಗಳ ಕುರಿತು ಚರ್ಚೆ ನಡೆಯಿತು.

ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಹಾಗೂ ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ ಹೆಸರುಗಳನ್ನು ಚರ್ಚಿಸಲಾಯಿತು. ಅಂತಿಮವಾಗಿ ಸಂಸ್ಥೆಯ ಆಡಳಿತ ಮಂಡಳಿ ‘ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ’ ಎಂಬ ಹೆಸರನ್ನು ಸರ್ಕಾರಕ್ಕೆ ಪ್ರಸ್ತಾಪಿಸಿತ್ತು.

ಆದರೆ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ‘ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ’ ಎಂಬ ಹೆಸರನ್ನು ಅಧಿಕೃತಗೊಳಿಸಲಾಗಿದೆ.

ಇಲ್ಲಿಯೇ ಈಗ ಹೊಸ ವಿವಾದ ಆರಂಭವಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರನ್ನು ಸಂಸ್ಥೆಗೆ ಇಟ್ಟಿರುವುದಕ್ಕೆ ವಿರೋಧವಿಲ್ಲ. ಆದರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರಿನಲ್ಲಿದ್ದ ಕರ್ನಾಟಕ ಎಂಬ ಪದವನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಕರ್ನಾಟಕದ ಹೆಸರಿನೊಂದಿಗೆ ಸಂಸ್ಥೆಯ ಗುರುತನ್ನು ಉಳಿಸಿಕೊಳ್ಳಬಹುದಿತ್ತಲ್ಲವೇ? ರಾಣಿ ಚನ್ನಮ್ಮ ಅವರ ಹೆಸರಿನ ಜೊತೆಗೆ ಕರ್ನಾಟಕ ಎಂಬ ಪದವನ್ನೂ ಸೇರಿಸಬಹುದಿತ್ತಲ್ಲವೇ? ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.

ಇದೇ ವಿಚಾರವಾಗಿ ದಲಿತ ವಿಮೋಚನಾ ಸಮಿತಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಮರುನಾಮಕರಣದ ಆದೇಶದಲ್ಲಿ ಕರ್ನಾಟಕ ಎಂಬ ಪದವನ್ನು ಸೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಒಂದೆಡೆ ಹಲವು ವರ್ಷಗಳ ಬೇಡಿಕೆ ಈಡೇರಿದ ಸಂತಸವಿದ್ದರೆ, ಮತ್ತೊಂದೆಡೆ ಹೊಸ ಹೆಸರಿನಲ್ಲಿ ಕರ್ನಾಟಕದ ಅಸ್ಮಿತೆಯೇ ಕಾಣೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಸಾರಿಗೆ ಸಂಸ್ಥೆಯ ಹೆಸರು ಬದಲಾವಣೆಯಿಂದ ಸಂಸ್ಥೆಯ ಆಡಳಿತ, ಸೇವೆ ಅಥವಾ ಪ್ರಯಾಣಿಕರಿಗೆ ಸಿಗುವ ಸೌಲಭ್ಯಗಳಲ್ಲಿ ಏನು ಬದಲಾವಣೆಯಾಗಲಿದೆ? ಮರುನಾಮಕರಣಕ್ಕೆ ತಗಲುವ ವೆಚ್ಚ ಎಷ್ಟು? ಹೆಸರು ಬದಲಾವಣೆಯೊಂದಿಗೆ ಸಂಸ್ಥೆಯ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಲಿದೆಯೇ? ಎಂಬ ಪ್ರಶ್ನೆಗಳೂ ಎದುರಾಗಿವೆ.

ಒಟ್ಟಿನಲ್ಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮರುನಾಮಕರಣದ ಬೇಡಿಕೆ ಈಡೇರಿದೆ. ಆದರೆ ಹೊಸ ಹೆಸರಿನಲ್ಲಿ ಕರ್ನಾಟಕ ಪದ ಕೈಬಿಟ್ಟಿರುವುದು ಮತ್ತೊಂದು ಚರ್ಚೆಗೆ ನಾಂದಿ ಹಾಡಿದೆ. ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರಿನೊಂದಿಗೆ ಕರ್ನಾಟಕದ ಹೆಸರನ್ನೂ ಉಳಿಸಬೇಕೆಂಬ ಒತ್ತಾಯ ಈಗ ಕೇಳಿಬಂದಿದೆ. ಸರ್ಕಾರ ಈ ಆಕ್ಷೇಪಕ್ಕೆ ಸ್ಪಂದಿಸಿ ಹೆಸರಿನಲ್ಲಿ ಬದಲಾವಣೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕ್ಯಾಮೆರ ಪರ್ಸನ ಹೇಮಂತ್ ಜೋತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author