Political News: ಸ್ಮಾರ್ಟ್ ಮೀಟರ್ ಅಳವಡಿಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಬೆಸ್ಕಾಂ ಕೇಂದ್ರ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬ ಬಿಜೆಪಿಯ ಆರೋಪಕ್ಕೆ ಇದೀಗ ಪುಷ್ಠಿ ನೀಡುವಂತಾಗಿದೆ. ಈ ಕುರಿತು ಕಳೆದ ಸದನದಲ್ಲಿಯೇ ವಿಪಕ್ಷ ನಾಯಕ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಆದರೆ ಆಗ ಇದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದ ಇಂಧನ ಇಲಾಖೆಯು, ಯಾವುದೇ ನಿಯಮಗಳ ಉಲ್ಲಂಘನೆಯಾಗಿಲ್ಲ. ಬದಲಿಗೆ ಕೇಂದ್ರದ ನಿಯಮಗಳಂತೆಯೇ ಗುತ್ತಿಗೆ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿತ್ತು. ಆದರೆ ಈ ವಿಚಾರದಲ್ಲಿ ಈಗ ಇಲಾಖೆಯೇ ತನ್ನನ್ನೇ ತಾನು ಪ್ರಶ್ನೆ ಮಾಡುವಂತಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿನ ಹಗರಣ ಬಟಾ ಬಯಲಾಗಿದೆ.
ಕೇಂದ್ರದ ನಿಯಮಗಳನ್ನು ಗಾಳಿಗೆ ತೂರಿದ ಬೆಸ್ಕಾಂ..!
ಇನ್ನೂ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಒಬ್ಬರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಇನ್ನುಳಿದ ಯಾವುದೇ ಕಂಪನಿಗಳು ಭಾಗವಹಿಸದಂತೆ ಷರತ್ತುಗಳನ್ನೇ ಬದಲಾವಣೆ ಮಾಡಲಾಗಿದೆ. ಅಲ್ಲದೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ದಾಖಲೆಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಆದೇಶ ಮತ್ತು ಟೆಂಡರ್ ದಾಖಲೆಗಳು ಈ ಆರೋಪಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತವೆ. ಅಲ್ಲದೆ ಪ್ರಮುಖವಾಗಿ ಸ್ಮಾರ್ಟ್ ಮೀಟರ್ ತಂತ್ರಾಂಶ, ನಿರ್ವಹಣೆ ವ್ಯವಸ್ಥೆ ಪೂರೈಸುವ ಕಂಪನಿಗಳ ಕೆಲಸದ ಅನುಭವದ ವಿಚಾರದಲ್ಲಿ ಕೇಂದ್ರವು ನಿಗದಿ ಮಾಡಿದ್ದ ಷರತ್ತುಗಳನ್ನು ಬೆಸ್ಕಾಂ ಕೈ ಬಿಟ್ಟಿದೆ. ಅಂದಹಾಗೆ ಟೆಂಡರ್ ಪ್ರಕ್ರಿಯೆಯಲ್ಲಿ ಜಾಗತಿಕ ಮಟ್ಟದ ಸ್ಪರ್ಧೆಗೆ ಅವಕಾಶ ಇರಬೇಕು ಎಂಬ ನಿಯಮವಿದ್ದರೂ ಸಹ, ಕರ್ನಾಟಕ ದಲ್ಲಿ ಕಾರ್ಯನಿರ್ವಹಿಸಿದ ಕಂಪನಿಗಳಷ್ಟೇ ಬಿಡ್ ಸಲ್ಲಿಸಬಹುದು ಎಂದೂ ಷರತ್ತಿನಲ್ಲಿ ನಿರ್ಬಂಧ ಹೇರಲಾಗಿತ್ತು. ಈ ಕಾರಣದಿಂದ ಹೊರ ರಾಜ್ಯದ ಕಂಪನಿಗಳು, ಜಾಗತಿಕ ಮಟ್ಟದ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂಬ ವಿಚಾರ ಬಯಲಾಗಿದೆ. ಇದಕ್ಕೆಲ್ಲ ಬೆಸ್ಕಾಂ ವಿಧಿಸಿದ್ದ ಷರತ್ತುಗಳೇ ಕಾರಣ ಎನ್ನುವುದನ್ನು ಟೆಂಡರ್ ದಾಖಲೆಗಳೇ ಹೇಳುತ್ತಿವೆ.
117 ಅಸಮಾಧಾನಕರ ಪ್ರಶ್ನೆಗಳನ್ನು ಕೇಳಲಾಗಿತ್ತು..
ಅಲ್ಲದೆ ಬಿಡ್‌ಪೂರ್ವ ಸಭೆಯಲ್ಲಿ 10 ಕಂಪನಿಗಳು ಭಾಗವಹಿಸಿದ್ದವು. ಬೆಸ್ಕಾಂ ರೂಪಿಸಿದ್ದ ಟೆಂಡರ್ ನಿಯಮಗಳಲ್ಲಿ ಹೆಚ್ಚಿನ ನಿರ್ಬಂಧಗಳು ಕಂಡು ಬಂದಿದ್ದವು. ಷರತ್ತುಗಳ ವಿಚಾರವಾಗಿ ಸಭೆಯಲ್ಲಿ 117 ಆಕ್ಷೇಪ ಮತ್ತು ಪ್ರಶ್ನೆ ಗಳನ್ನು ಕೇಳಲಾಗಿತ್ತು. ಅವುಗಳನ್ನು ಸರಿಪಡಿಸಿದರಷ್ಟೇ ಬಿಡ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ನಾವು ಕೋರಿಕೊಂಡಿದ್ದೇವು. ಆದರೆ, ಟೆಂಡರ್ ಷರತ್ತುಗಳಲ್ಲಿ ಬೆಸ್ಕಾಂ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಹೀಗಾಗಿ ಬಿಡ್‌ಪೂರ್ವ ಸಭೆಯಲ್ಲಿ ಭಾಗಿಯಾಗಿದ್ದ 10 ಕಂಪನಿಗಳಲ್ಲಿ ಯಾವುದಕ್ಕೂ ಗುತ್ತಿಗೆ ಸಿಗಲಿಲ್ಲ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅನುಭವ ಇಲ್ಲದ ಕಂಪನಿಗೆ ಗುತ್ತಿಗೆ ದೊರೆತಿದೆ ಎಂದು ಬಿಡ್‌ಪೂರ್ವ ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಕಂಪನಿಯೊಂದರ ವ್ಯವಸ್ಥಾಪಕರು ಆರೋಪ ಮಾಡಿದ್ದಾರೆ.
ದಾವಣಗೆರೆ ಮೂಲದ ಕಂಪನಿಗೆ ಗುತ್ತಿಗೆ..!
ಇನ್ನೂ ಈ ಸ್ಮಾರ್ಟ್ ಮೀಟರ್ ಯೋಜನೆಯ ಸಂಪೂರ್ಣ ಗುತ್ತಿಗೆಯನ್ನು ದಾವಣಗೆರೆ ಮೂಲದ ಕಂಪನಿಗೆ ವಹಿಸಲಾಗಿದೆ. ಇದಕ್ಕಾಗಿ ಮೂರು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳೆಂದರೆ ಜೀನಸ್, ಶಿಂಡರ್ ಹಾಗೂ ಎಚ್‌ಪಿಎಲ್ ಇವುಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಸ್ಮಾರ್ಟ್ ಮೀಟರ್ ತಂತ್ರಾಂಶ, ಮೀಟರ್ ದತ್ತಾಂಶ ನಿರ್ವಹಣಾ ತಂತ್ರಾಂಶ, ಮೀಟರ್–ಮೊಬೈಲ್ ಸಂಪರ್ಕ ತಂತ್ರಾಂಶ ಈ ಎಲ್ಲವುಗಳನ್ನು ಪರಸ್ಪರ ಸಂಯೋಜಣೆ ಮಾಡುವ ವ್ಯವಸ್ಥೆಯ ಪೂರೈಕೆಗೆ ಎರಡು ಕಂಪನಿಗಳನ್ನು ಅಂದರೆ ಜೀನಸ್ ಮತ್ತು ಬಿಸಿಐಟಿಎಸ್ ಇವುಗಳನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲವುಗಳ ನಿರ್ವಹಣೆಯನ್ನು ದಾವಣಗೆರೆಯ ಕಂಪನಿ ಮಾಡುತ್ತದೆ. ಸ್ಮಾರ್ಟ್ ಮೀಟರ್ ವ್ಯವಸ್ಥೆಯು ಬಹುತೇಕ ಸ್ಮಾರ್ಟ್‌ಫೋನ್‌ನಂತೆಯೇ ಕೆಲಸ ಮಾಡುತ್ತದೆ. ಸ್ಮಾರ್ಟ್ ಮೀಟರ್ ಒಂದು ಉಪಕರಣವಾದರೆ, ಅದು ಕಾರ್ಯನಿರ್ವಹಿಸಲು ಹಲವು ತಂತ್ರಾಂಶಗಳ ಅಂದರೆ ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳು ಅಗತ್ಯ ಇದೆ. ಈ ಎಲ್ಲವನ್ನೂ ಒಂದೇ ಕಂಪನಿ ಪೂರೈಸಲು ಸಾಧ್ಯವಾಗುವುದಿಲ್ಲ.
ಯಾರಿಗೆ ಅನುಕೂಲ..? ಇನ್ಯಾರಿಗೆ ನಷ್ಟ..?
ಪ್ರಮುಖವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅನುಕೂಲ ಯಾರಿಗೆ ಆಗುತ್ತದೆ, ಬೆಸ್ಕಾಂ ಮಾಡಿರುವ ಸ್ವಯಂ ಟೆಂಡರ್ ನಿಯಮವೇನು..? ಆದರೆ ಗುತ್ತಿಗೆ ಪಡೆದುಕೊಂಡ ಕಂಪನಿಗಳಿಗೆ ಆದ ಲಾಭವೇನು..? ಎನ್ನುವುದನ್ನು ನಾವು ನೋಡಿದಾಗ, ಮೀಟರ್ ಮಳಿಗೆಗಳನ್ನು ತೆರೆದು ಐದು ವರ್ಷ ವಹಿವಾಟು ನಡೆಸಿದ ಅನುಭವ ಇರಬೇಕು ಎನ್ನುವುದು ಬೆಸ್ಕಾಂ ನಿಯಮವಾಗಿದೆ. ಆದರೆ ಕೇಂದ್ರದಲ್ಲಿ ಇಂತಹ ಷರತ್ತು ಇಲ್ಲ, ಇದರಿಂದ ಬಿಡ್‌ಪೂರ್ವ ಸಭೆಯಲ್ಲಿ ಭಾಗವಹಿಸಿದ್ದ ಕಂಪನಿಗಳಿಗೆ ಈ ಅನುಭವ ಇರಲಿಲ್ಲ. ಗುತ್ತಿಗೆ ಪಡೆದುಕೊಂಡ ದಾವಣಗೆರೆಯ ಕಂಪನಿಯು ರಾಜ್ಯದ ಹಲವೆಡೆ ವಿದ್ಯುತ್ ಪೂರೈಕೆ ಜಾಲ ಉಪಕರಣಗಳು ಮತ್ತು ಮೀಟರ್ ಮಳಿಗೆಗಳನ್ನು ಹೊಂದಿದ್ದು, ಅದಕ್ಕಷ್ಟೇ ಇದರ ಲಾಭವಾಗಲಿದೆ.
ಇನ್ನೂ ಮೀಟರ್ ತಂತ್ರಾಂಶ, ಬಿಲ್ಲಿಂಗ್ ವ್ಯವಸ್ಥೆ ಪೂರೈಸುವ ಕಂಪನಿಯು ಭಾರತದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು ಎನ್ನುವುದು ಬೆಸ್ಕಾಂ ನಿಯಮವಾಗಿದೆ. ಆದರೆ ವಾಸ್ತವದಲ್ಲಿ ಕೇಂದ್ರದ ನಿಯಮಗಳಲ್ಲಿ ಜಾಗತಿಕ ಕಂಪನಿಯೂ ಭಾಗವಹಿಸಬಹುದು ಎಂಬುದಾಗಿದೆ. ಇದರಿಂದ ಜಾಗತಿಕ ಮಟ್ಟದ ಕಂಪನಿಗಳ ಎಂಬ ಷರತ್ತು ಕೈಬಿಟ್ಟ ಕಾರಣ, ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಅನುಕೂಲವಾಯಿತು. ಒಟ್ಟು ಐದು ಷರತ್ತುಗಳಲ್ಲಿ ಈ ಅಂಶವನ್ನು ಕೈಬಿಡಲಾಗಿದೆ.
ಅಲ್ಲದೆ ಮೀಟರ್ ಮೊಬೈಲ್ ಸಂಪರ್ಕಕ್ಕೆ ರೇಡಿಯೊ ಫ್ರೀಕ್ವೆನ್ಸಿ ಮತ್ತು ಸೆಲ್ಯುಲಾರ್ ತಂತ್ರಾಂಶ ಎರಡನ್ನೂ ಪೂರೈಸಿರುವ ಅನುಭವ ಇರಬೇಕು ಎಂಬುದಾಗಿ ಬೆಸ್ಕಾಂ ತನ್ನ ಷರತ್ತಿನಲ್ಲಿ ತಿಳಿಸಿತ್ತು. ಆದರೆ ಕೇಂದ್ರ ಸರ್ಕಾರದಲ್ಲಿ ಈ ಷರತ್ತು ಇಲ್ಲ ಇದರ ಬಗ್ಗೆ ಬೆಂಗಳೂರಿನ ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಮಾತ್ರ ಈ ಅನುಭವ ಇದ್ದು, ಇತರ ಕಂಪನಿಗಳು ಟೆಂಡರ್ ವಂಚಿತವಾಗಿದ್ದವು.
ಅಂದಹಾಗೆ ಕನಿಷ್ಠ 2 ಲಕ್ಷ ಸ್ಮಾರ್ಟ್ ಮೀಟರ್‌ಗಳಿಗೆ ತಂತ್ರಾಂಶ ಸಂಯೋಜನಾ ವ್ಯವಸ್ಥೆ ಅಳವಡಿಸಿದ ಅನುಭವ ಇರಬೇಕು ಎನ್ನುವುದು ಬೆಸ್ಕಾಂ ನಿಯಮವಾಗಿದೆ. ಆದರೆ ಕೇಂದ್ರದಲ್ಲಿ ಈ ಷರತ್ತೇ ಇಲ್ಲ ಇದರಲ್ಲಿ ಇತರ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಗುತ್ತಿಗೆ ಪಡೆದಿದ್ದ ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಮಾತ್ರ ಈ ಅನುಭವ ಇದ್ದು, ಹೀಗಾಗಿ ಇತರ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಲು ಅನರ್ಹಗೊಂಡಿದ್ದವು.
ಇನ್ನೂ ಕನಿಷ್ಠ 2 ಲಕ್ಷ ಸ್ಮಾರ್ಟ್ ಮೀಟರ್‌ಗಳಿಗೆ ಮೀಟರ್ ಮೊಬೈಲ್ ಸಂಪರ್ಕಕ್ಕೆ ರೇಡಿಯೊ ಫ್ರೀಕ್ವೆನ್ಸಿ ಮತ್ತು ಸೆಲ್ಯುಲಾರ್ ತಂತ್ರಾಂಶ ಅಳವಡಿಸಿದ ಅನುಭವ ಇರಬೇಕು ಅಂತ ಬೆಸ್ಕಾಂ ಹೇಳಿಕೊಂಡಿತ್ತು. ಆದರೆ 50,000 ಸ್ಮಾರ್ಟ್ ಮೀಟರ್‌ಗಳಿಗೆ ತಂತ್ರಾಂಶ ಅಳವಡಿಸಿದ ಅನುಭವ ಇದ್ದರೆ ಸಾಕು ಎಂಬುದಾಗಿ ಕೇಂದ್ರದ ನಿಯಮವಾಗಿದೆ. ಇದರಲ್ಲಿ ಜೀನಸ್ ಪವರ್ ಮತ್ತು ಬಿಸಿಐಟಿಎಸ್‌ಗೆ ಮಾತ್ರ ಈ ಅನುಭವ ಇದ್ದು, ಇತರ ಕಂಪನಿಗಳು ಬಿಡ್‌ನಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.