Thursday, December 26, 2024

Latest Posts

ರಾಜಮೌಳಿ ಶಿಷ್ಯನ ಚಿತ್ರದಲ್ಲಿ ರಿಷಭ್ ಶೆಟ್ಟಿ ಕಾಂತಾರ ಮೇಕರ್‌ಗೆ ಭಾರೀ ಡಿಮ್ಯಾಂಡ್!

- Advertisement -

Sandalwood News: ಕನ್ನಡ ಚಿತ್ರರಂಗ ಈಗ ಬರೀ ಕನ್ನಡಕ್ಕೆ ಸೀಮಿತವಾಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಅಂತೆಯೇ, ಕನ್ನಡದ ಸ್ಟಾರ್ ನಟರು ಮತ್ತು ನಿರ್ದೇಶಕರೂ ಸಹ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿದ್ದಾರೆ ಅನ್ನೊದು ಕೂಡ ಗೊತ್ತಿದೆ. ಈಗ ಹೊಸ ಸುದ್ದಿ ಏನಪ್ಪ ಅಂದ್ರೆ, ರಾಜಮೌಳಿ ಅವರ ಶಿಷ್ಯನ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಹೌದು, ಕಾಂತಾರ ಚಿತ್ರ ಯಾವಾಗ ಹೊರಬಂತೋ ಅಂದಿನಿಂದಲೂ ರಿಷಭ್ ಶೆಟ್ಟಿ ಅವರಿಗೆ ಸಖತ್ ಡಿಮ್ಯಾಂಡ್ ಆಗಿದ್ದಂತೂ ಸುಳ್ಳಲ್ಲ ಬಿಡಿ. ಹಾಗಾಗಿ ಅವರನ್ನು ಪರಭಾಷೆಯ ಚಿತ್ರರಂಗ ಕೈ ಬೀಸಿ ಕರೆಯುತ್ತಿದೆ. ಅವಕಾಶಗಳು ಕೂಡ ಅರಸಿ ಬರುತ್ತಿವೆ ಅನ್ನೋದು ಖುಷಿಯ ವಿಷಯ.

ಈಗಾಗಲೇ ರಿಷಭ್ ಶೆಟ್ಟಿ ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಆ ಸಿನಿಮಾ ಬೆನ್ನಲ್ಲೇ ಮತ್ತೊಂದು ಹೊಸ ತೆಲುಗು ಸಿನಿಮಾದಲ್ಲಿ ನಟಿಸೋದಿಕ್ಕೂ ರಿಷಭ್ ಯೆಸ್ ಅಂದಿದ್ದಾರೆ. ಈ ಬೆಳವಣಿಗೆ ನೋಡಿದರೆ, ಕಾಂತಾರ’ ಸಿನಿಮಾದ ಸಕ್ಸಸ್ ರಿಷಬ್ ಅವರಿಗೆ ಸಾಲು ಸಾಲು ಅವಕಾಶಗಳ ಸರಮಾಲೆಯನ್ನೇ ತೊಡಿಸಿದೆ ಅಂದರೆ ತಪ್ಪಿಲ್ಲ. ‘ಕಾಂತಾರ’ ಸಿನಿಮಾ ಬಳಿಕ ರಿಷಭ್ ಶೆಟ್ಟೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದಂತೂ ಪಕ್ಕಾ. ಹಾಗಾಗಿಯೇ ಹಲವು ಭಾಷೆಯ ಚಿತ್ರರಂಗದಿಂದ ಬೇಡಿಕೆ ಹೆಚ್ಚುತ್ತಿದೆ. ಬಾಲಿವುಡ್ ಸ್ಟಾರ್ ನಿರ್ದೇಶಕ ಅಶುತೋಷ್ ಗೋವರಿಕರ್ ನಿರ್ದೇಶನದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಇನ್ನು, ತೆಲುಗಿನ ‘ಹನುಮಾನ್’ ಖ್ಯಾತಿಯ ಪ್ರಶಾಂತ್ ವರ್ಮಾ ಹೊಸ ಸಿನಿಮಾ ‘ಜೈ ಹನುಮಾನ್’ನಲ್ಲಿ ರಿಷಬ್ ನಟಿಸುವುದು ಖಾತ್ರಿಯಾಗಿದ್ದು, ಪೋಸ್ಟರ್ ಕೂಡ ರಿಲೀಸ್ ಆಗಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್​ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ.

ಅಂದಹಾಗೆ, ರಾಜಮೌಳಿ ನಿರ್ದೇಶನದ ‘ಬಾಹುಬಲಿ 1 ಮತ್ತು ಬಾಹುಬಲಿ 2, ‘ಈಗ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಶ್ವಿನ್ ಗಂಗರಾಜು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಅಶ್ವಿನ್ ಗಂಗರಾಜು ಈಗಾಗಲೇ ‘ಆಕಾಶವಾಣಿ’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇಷ್ಟರಲ್ಲೇ ರಿಷಬ್ ಶೆಟ್ಟಿ ಅವರೊಂದಿಗಿನ ಸಿನಿಮಾ ಅನೌನ್ಸ್ ಮಾಡಲಿದ್ದಾರೆ.

ಇದು ಆಗಿನ ಕಾಲಘಟ್ಟದ ಕಥಾಹಂದರ ಇರುವ ಚಿತ್ರ. ಸಿನಿಮಾದಲ್ಲಿ ರಿಷಭ್ ಶೆಟ್ಟಿ ಹೀರೋ . ಸಿನಿಮಾದ ಕಥೆ ಮತ್ತು ಅವರ ಪಾತ್ರ ಏನು ಎತ್ತ ಎಂಬುದು ಇನ್ನಷ್ಟೇ ಹೊರಬರಬೇಕಿದೆ. ಅಶ್ವಿನ್ ಗಂಗರಾಜು ಅವರು ಹೇಳಿದ ಕಥೆ ಇಷ್ಟಪಟ್ಟು, ಸಿನಿಮಾದಲ್ಲಿ ನಟಿಸೋಕೆ ರಿಷಭ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ರಿಷಭ್ ಶೆಟ್ಟಿ ಅಭಿನಯಿಸಲಿರುವ ಈ ಚಿತ್ರ ತೆಲುಗಿನ ಯಶಸ್ವಿ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಸಿತಾರಾ ಎಂಟರ್ಟೈನ್​ಮೆಂಟ್ ನಡಿ ನಿರ್ಮಾಣ ಆಗುತ್ತಿದೆ. ಈಗಾಗಲೇ ಸೂಪರ್ ಹಿಟ್ ತೆಲುಗು ಸಿನಿಮಾಗಳಾದ ‘ಜರ್ಸಿ’, ‘ಭೀಷ್ಮ’, ‘ಟಿಜೆ ಟಿಲ್ಲು’ ಇತ್ತೀಚೆಗೆ ಬಿಡುಗಡೆ ಆದ ‘ಲಕ್ಕಿ ಭಾಸ್ಕರ್’ ಸೇರಿದಂತೆ ಇನ್ನೂ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಿತಾರಾ ನಿರ್ಮಾಣ ಸಂಸ್ಥೆ ಈ ಚಿತ್ರವನ್ನೂ ನಿರ್ಮಿಸುತ್ತಿದೆ.

ಸದ್ಯ ರಿಷಬ್ ಶೆಟ್ಟಿ ‘ಕಾಂತಾರ’ ಪ್ರೀಕ್ವೆಲ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ನಡೆಯುತ್ತಿದೆ. ವಿದೇಶಿ ತಂತ್ರಜ್ಞರ ಸಹಾಯ ಪಡೆದು ಕೆಲಸ ಮಾಡುತ್ತಿರುವ ರಿಷಬ್ ಶೆಟ್ಟಿ ಈ ಸಿನಿಮಾ ನಂತರ ತೆಲುಗಿನ ‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣದ ಸೆಟ್ ಗೆ ಹೋಗಲಿದ್ದಾರೆ. ಆ ಸಿನಿಮಾ ನಂತರ ಅಶ್ವಿನ್ ಗಂಗರಾಜು ನಿರ್ದೇಶನದ ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

ಅದೇನೆ ಇರಲಿ, ಕನ್ನಡ ಚಿತ್ರರಂಗ ಈಗಂತೂ ಎಂದಿಗಿಂತ ಶೈನ್ ಆಗಿದೆ. ಕನ್ನಡದ ಒಬ್ಬೊಬ್ಬರೇ ನಿರ್ದೇಶಕರು, ನಟರುಗಳು ಅಷ್ಟೇ ಅಲ್ಲ, ತಾಂತ್ರಿಕ ವರ್ಗದವರೂ ಕೂಡ ಪರಭಾಷೆ ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ. ಇದು ಕನ್ನಡಿಗರಿಗೆ ಇರುವ ತಾಕತ್ತು ಅಲ್ಲವೇ?

ವಿಜಯ್ ಭರಮಸಾಗರ, ಫಿಲ್ಮಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss