ಮಕ್ಕಳ ರಕ್ಷಣೆ ಕಾರ್ಯದಲ್ಲಿ ಆರ್‌ಪಿಎಫ್‌ ಸಾಧನೆ: ಒಂದೇ ತಿಂಗಳಲ್ಲಿ 67 ಮಕ್ಕಳ ರಕ್ಷಣೆ

ನೈಋತ್ಯ ರೈಲ್ವೆ ವಲಯದ ರೈಲ್ವೆ ರಕ್ಷಣಾ ಪಡೆ (RPF) ಮಕ್ಕಳ ರಕ್ಷಣೆ ಕಾರ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 67 ಮಕ್ಕಳನ್ನು ರಕ್ಷಿಸಿ ಅವರ ಕುಟುಂಬದವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ನನ್ಹೆ ಫರಿಷ್ತೆ’ ಅಭಿಯಾನದಡಿ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ರೈಲ್ವೆ ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಅಲೆದಾಡುತ್ತಿದ್ದ ಮಕ್ಕಳನ್ನು ಪತ್ತೆಹಚ್ಚಿ ರಕ್ಷಣೆ ಮಾಡಲಾಗಿದೆ. ಮನೆಯಿಂದ ತಪ್ಪಿಸಿಕೊಂಡಿದ್ದ ಮಕ್ಕಳು, ಪಾಲಕರಿಂದ ದೂರವಾಗಿದ್ದವರು ಹಾಗೂ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಕಂಡುಬಂದ ಮಕ್ಕಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಮಕ್ಕಳಲ್ಲಿ 55 ಹುಡುಗರು ಮತ್ತು 12 ಹುಡುಗಿಯರು ಸೇರಿದ್ದಾರೆ. ಮಕ್ಕಳ ಸುರಕ್ಷತೆ ಹಾಗೂ ಕುಟುಂಬಗಳೊಂದಿಗೆ ಮರುಸೇರಿಸುವ ಕಾರ್ಯದಲ್ಲಿ ಆರ್‌ಪಿಎಫ್ ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಕ್ಕಳನ್ನು ಪತ್ತೆ ಮಾಡಿದ ಬಳಿಕ ಅವರ ಗುರುತು ಪರಿಶೀಲನೆ ನಡೆಸಿ, ಅಗತ್ಯ ಕಾನೂನು ಪ್ರಕ್ರಿಯೆಗಳ ನಂತರ ಕುಟುಂಬ ಸದಸ್ಯರೊಂದಿಗೆ ಮರುಸೇರಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದ್ದು, ಮಕ್ಕಳ ರಕ್ಷಣೆ ಮತ್ತು ಮಾನವೀಯ ಸೇವೆಯಲ್ಲಿ ಆರ್‌ಪಿಎಫ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

About The Author