ಹಾಸನಾಂಬ ದೇವಿ ದರ್ಶನಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ರು. ಅಕ್ಟೋಬರ್ 9ರಂದು ದೇಗುಲದ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 10ರಿಂದ ಅಕ್ಟೋಬರ್ 22ರವರೆಗೆ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಕ್ಟೋಬರ್ 23ರಂದು ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಲಾಗಿದೆ. ಇನ್ನು, 2026 ಅಕ್ಟೋಬರ್ 29ಕ್ಕೆ ಬಾಗಿಲು ತೆರೆಯಲಾಗುತ್ತದೆ.
ಸದ್ಯ, ಹಾಸನಾಂಬೆ ಸನ್ನಿಧಿಯಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಇಂಡೋನೇಷ್ಯಾ, ಮಾಲ್ಡೀವ್ಸ್ ಹಾಗೂ ಅಮೆರಿಕ ಕರೆನ್ಸಿಗಳು ಪತ್ತೆಯಾಗಿವೆ. ವಿವಿಧ ದೇಶಗಳ ಹಣವನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ. ನಿಷೇಧಿತ ಐನೂರು ರೂಪಾಯಿ ನೋಟುಗಳು, ಇಷ್ಟಾರ್ಥ ಈಡೇರಿಸುವಂತೆ ಭಕ್ತರು ಬರೆದಿರುವ ಪತ್ರಗಳೂ ಸಹ, ಹುಡಿಯಲ್ಲಿ ಸಿಕ್ಕಿವೆ. ಡಿಸಿ ಲತಾ ಕುಮಾರಿ, ಆಡಳಿತಾಧಿಕಾರಿ ಮಾರುತಿ ಮೇಲ್ವಿಚಾರಣೆಯಲ್ಲಿ ಇಂದು ಬೆಳಗ್ಗೆಯಿಂದ ಹುಂಡಿ ಹಣ ಎಣಿಕೆ ಮಾಡಲಾಗಿದೆ.
ಇನ್ನು, 13 ದಿನಗಳಲ್ಲಿ 26.13 ಲಕ್ಷ ಜನರು ಹಾಸನಾಂಬೆಯ ದರ್ಶನವನ್ನು ಪಡೆದಿದ್ದಾರೆ. ಕಳೆದ ವರ್ಷ 17.47 ಲಕ್ಷ ಭಕ್ತರು ಬಂದಿದ್ರು. ಈ ಬಾರಿ 9 ಲಕ್ಷಕ್ಕೂ ಹೆಚ್ಚು ಭಕ್ತರು ಬಂದಿದ್ದಾರೆ. ಈ ಬಾರಿ ಹಾಸನಾಂಬೆಯ ದರ್ಶನದಿಂದ ಭರ್ಜರಿ ಆದಾಯ ಹರಿದು ಬಂದಿದೆ. ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ, 21.82 ಕೋಟಿ ಆದಾಯ ಬಂದಿದೆ . ಕಳೆದ ಬಾರಿ ಟಿಕೆಟ್ ಹಾಗೂ ಲಾಡು ಮಾರಾಟದಿಂದ 9.68 ಕೋಟಿ ಆದಾಯ ಬಂದಿತ್ತು.

