ಜೆಡಿಎಸ್‌ನ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದ ಒಳಗಿನ ‘ಚಾಡಿಕೋರರು’ ನಾಯಕತ್ವವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷದಲ್ಲಿ ಚಾಡಿಕೋರರು ಇರುತ್ತಾರೆ. ಅದೇ ರೀತಿ ನಮ್ಮ ಜೆಡಿಎಸ್‌ನಲ್ಲೂ ಕೆಲವರು ಇದ್ದಾರೆ. ಅವರ ಸುಳ್ಳು ಚಾಡಿ ಮಾತುಗಳಿಂದ ಪಕ್ಷ ಕಟ್ಟಿದವರಿಗೆ ಸ್ಥಾನಮಾನ ಸಿಗುತ್ತಿಲ್ಲ ಎಂದು ಟೀಕಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಟಿ. ದೇವೇಗೌಡ, ಹತ್ತಾರು ವರ್ಷಗಳಿಂದ ತಳಮಟ್ಟದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ನಾಯಕರ ವರ್ತನೆ ಮನಸ್ಸಿಗೆ ನೋವಾಗಿದೆ. ನನಗೆ ಅಸಮಾಧಾನ ಇದ್ದರೂ, ನಾನು ಜೆಡಿಎಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಾನು ಪಕ್ಷದಲ್ಲೇ ಇರುತ್ತೇನೆ ಎಂದರು.
ಪಕ್ಷದ ಎಲ್ಲಾ ಸಮಿತಿಗಳಿಂದ ನನ್ನ ಹೆಸರನ್ನು ಕೈಬಿಡಲಾಗಿದೆ. ಈಗ ನನಗೆ ಪಕ್ಷ ಕಚೇರಿಯಲ್ಲಿ ಯಾವುದೂ ಕೆಲಸವಿಲ್ಲ. ಹೀಗಾಗಿ ನನ್ನ ಕ್ಷೇತ್ರದಲ್ಲೇ ಇದ್ದು ಜನರ ಕೆಲಸ ಮಾಡುತ್ತೇನೆ ಎಂದು ಅವರು ಅಸಮಾಧಾನ ತೋರ್ಪಡಿಸಿದರು. ಶಾಸಕಾಂಗ ಪಕ್ಷದ ನಾಯಕರ ವಿಚಾರದಲ್ಲಿ ತನ್ನನ್ನು ಕಡೆಗಣಿಸಿದ ರೀತಿಯನ್ನೂ ಅವರು ಪ್ರಶ್ನಿಸಿದರು. ನನಗೆ ಯಾವುದೇ ಆಸೆ ಇಲ್ಲದಿದ್ದರೂ ನನ್ನ ಹೆಸರನ್ನು ಸೂಚ್ಯವಾಗಿ ಕೈಬಿಟ್ಟರು. ಏಕೆ ಕೈಬಿಟ್ಟರು ಎಂಬುದನ್ನು ಕುಮಾರಸ್ವಾಮಿ ಅವರು ಈವರೆಗೂ ಹೇಳಿಲ್ಲ. ಅಂದಿನಿಂದ ನಾನು ನನ್ನ ಕೆಲಸದಲ್ಲಿ, ಅವರು ತಮ್ಮ ಕೆಲಸದಲ್ಲಿ ಬ್ಯುಸಿ. ಪಕ್ಷಕ್ಕಾಗಿ ದುಡಿದವರಿಗಿಂತಲೂ ಚಾಡಿಕೋರರಿಗೆ ಹೆಚ್ಚು ಮಹತ್ವ ಸಿಗುತ್ತಿದೆ ಎಂದು ಟೀಕಿಸಿದರು.
ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಪಾಂಡವಪುರದಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮನ್ನು ಶಾಸಕಾಂಗ ನಾಯಕನಂತೆ ಸೂಚಿಸಿದ್ದರೂ, ಅಧಿಕೃತ ಘೋಷಣೆ ಮಾಡದೇ ಬೇರೆ ಹೆಸರನ್ನು ಪ್ರಕಟಿಸಿದ ಬಗ್ಗೆ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಸೂಚನೆ ಆಧಾರದ ಮೇಲೆ ನಾನು ಹೊಸ ಕಚೇರಿಯನ್ನೂ ಆರಂಭಿಸಿದ್ದೆ. ಆದರೆ ಏಕೆ ನನ್ನನ್ನು ಬದಿಗಿಟ್ಟರು ಎಂಬುದಕ್ಕೆ ಕಾರಣವನ್ನೇ ಹೇಳಲಿಲ್ಲ. ಇದರಿಂದ ನನಗೆ ತುಂಬಾ ನೋವಾಯಿತು ಎಂದು ಅವರು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

