ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಎನ್. ರಾಜಣ್ಣ ಬಿಜೆಪಿ ಸೇರುತ್ತಾರೆ ಅಂತ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದ್ದರು. ಈ ಹೇಳಿಕೆಯಿಂದ ಅವರು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಇದೀಗ ರಾಜಣ್ಣ ಪುತ್ರ ಎಂಎಲ್‌ಸಿ ಆರ್. ರಾಜೇಂದ್ರ ಈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಶಾಸಕ ಬಾಲಕೃಷ್ಣ ಆರೋಪ ಮಾಡಿದಂತೆ ಕೆ.ಎನ್. ರಾಜಣ್ಣ ಅವರು ಬಿಜೆಪಿ ಸೇರುವುದಿಲ್ಲವೆಂದು ಸ್ಪಷ್ಟನೆ ನೀಡಿದ ರಾಜೇಂದ್ರ, ಈ ರೀತಿಯ ಹೇಳಿಕೆಗಳ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಬಾಲಕೃಷ್ಣ ಅವರು ಜೆಡಿಎಸ್, ಬಿಜೆಪಿ ಮುಗಿಸಿ ಈಗ ಕಾಂಗ್ರೆಸ್‌ಗೆ ಬಂದಿದ್ದಾರೆ. ಇಂತಹವರು ರಾಜಣ್ಣನವರನ್ನು ಟೀಕಿಸುವ ಹಕ್ಕಿಲ್ಲ ಅಂತ ನೇರವಾಗಿ ಹೇಳಿದ್ದಾರೆ.
ಕಾಣದ ಕೈಗಳು ರಾಜಣ್ಣ ಅವರನ್ನು ಮಂತ್ರಿಗಿರಿಯಿಂದ ತೆಗೆಸಿದ್ದು ಸ್ಪಷ್ಟವಾಗಿದೆ ಎಂದು ರಾಜೇಂದ್ರ ಆರೋಪಿಸಿದರು. ಕೆಲವರಿಗೆ ಮಾತನಾಡಲು ತೆವಲು ಇದೆ. ಅವರು ತೀಟೆ ತೀರಿಸಿಕೊಳ್ಳಲು ಇಂಥಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ರಾಜಣ್ಣ ಅವರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬಾಲಕೃಷ್ಣ ನೀಡಿದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಜೇಂದ್ರ, ರಾಜಣ್ಣನವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿಲ್ಲ. ಚಡ್ಡಿ ಹಾಕಿಕೊಂಡು ಶಾಖೆಗೆ ಹೋಗಿಲ್ಲ. ಏನಾದರೂ ಓಲೈಸಬೇಕಾದರೆ ರಾಜಣ್ಣ ವಿರುದ್ಧ ಮಾತಾಡಬೇಕು ಎಂಬ ಕಲ್ಚರ್ ಬಂದಿದೆ. ಸಿಎಂ ಸ್ಥಾನ ಕೊಡ್ತೀವಿ ಅಂತ ಹೇಳಿದರೆ ಇವರೆಲ್ಲಾ ಬಿಜೆಪಿಗೆ ಹೋದರೂ ಅಚ್ಚರಿಯಿಲ್ಲ ಎಂದು ಚಾಟಿ ಹಚ್ಚಿದರು.
ರಾಜಣ್ಣನವರಿಗೆ ವಿರುದ್ಧವಾಗಿ ಭ್ರಷ್ಟಾಚಾರದ ಯಾವುದೇ ಆರೋಪವಿಲ್ಲ. ಪಕ್ಷದ ವಿರುದ್ಧ ಅವರು ಯಾವತ್ತೂ ಮಾತನಾಡಿಲ್ಲ. ಪಕ್ಷದ ಆಂತರಿಕ ರಾಜಕೀಯದ ಕಾರಣದಿಂದಾಗಿ ಮಾತ್ರ ಅವರ ಮಂತ್ರಿಗಿರಿ ಹೋಗಿದೆ. ರಾಜಕೀಯ ಷಡ್ಯಂತ್ರದ ಭಾಗವಾಗಿ ರಾಜೀನಾಮೆ ಪಡೆಯಲಾಗಿದೆ. ಬಹಿರಂಗವಾಗಿ ಯಾರೂ ಬಿಜೆಪಿಯಿಂದ ಅವರನ್ನು ಸಂಪರ್ಕಿಸಿದಂತಿಲ್ಲ ಎಂದು ಅವರು ಆರೋಪಿಸಿದರು.
ರಾಜಣ್ಣನವರನ್ನು ಮಂತ್ರಿಗಿರಿಯ ಸ್ಥಾನಕ್ಕೆ ಮರಳಿ ನೇಮಿಸಬೇಕೆಂದು ಬಹುತೇಕ ಸ್ವಾಮೀಜಿಗಳು, ಸಾಮಾನ್ಯ ಜನರು, ಪಕ್ಷದ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ ಎಂಬುದನ್ನು ರಾಜೇಂದ್ರ ಬಹಿರಂಗ ಪಡಿಸಿದರು. ಅವರ ಮನೆಗೆ ಬಂದು ಸ್ವಾಮೀಜಿಗಳು ಮಾತನಾಡಿದ್ದಾರೆ. ಇದುವರೆಗೂ ಯಾರ ಮಾತಿಗೆ ಬಗ್ಗದ ರಾಜಣ್ಣನವರು ಪಕ್ಷವನ್ನು ತೊರೆಯೋದು ಸಾಧ್ಯವಿಲ್ಲ ಎಂದು ಅವರು ಹೇಳಿದರು.