Thursday, May 1, 2025

Latest Posts

ನನಗೆ ಜೀವ ಬೆದರಿಕೆ ಇದೆ, 24 ಗಂಟೆ ಗನ್ ಮ್ಯಾನ್ ಕೊಡಿ : ‌ಭದ್ರತೆಗಾಗಿ ಕೋರ್ಟ್‌ ಮೆಟ್ಟಿಲೇರಿದ ಮಹೇಶ್‌ ಜೋಶಿ

- Advertisement -

Bengaluru News: ನಿರಂತರ ಜೀವ ಬೆದರಿಕೆಯ ಫೋನ್‌ ಕರೆಗಳು ಹಾಗೂ ಮೆಸೇಜ್‌ಗಳು ಬರುತ್ತಿವೆ. ಹೀಗಾಗಿ ನನಗೆ ಪೊಲೀಸ್‌ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಆಗ್ರಹಿಸಿದ್ದಾರೆ. ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿಯನ್ನು ಆಲಿಸಿದ ಬಳಿಕ ರಾಜ್ಯ ಸರ್ಕಾರಕ್ಕೆ ಹಾಗೂ ಪ್ರತಿವಾದಿಗಳಿಗೆ ನೋಟಿಸ್‌ ಹೊರಡಿಸಿದೆ. ಅಲ್ಲದೆ ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಇನ್ನೂ ಈ ಸಂಬಂಧ ಮುಂದಿನ ವಿಚಾರಣೆಯನ್ನು ಮಾರ್ಚ್‌ 20ಕ್ಕೆ ಮುಂದೂಡಿದೆ.

ಇನ್ನೂ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಬಸವರಾಜ, ಮಹೇಶ್‌ ಜೋಶಿ ಅವರು 2021ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದಾರೆ. ಅಲ್ಲದೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರುತ್ತಿದ್ದಾರೆ. ಆದರೆ ಕಳೆದ ವರ್ಷ ಮಂಡ್ಯದಲ್ಲಿ ನಡೆದಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ನಿರಂತರವಾಗಿ ಬೆದರಿಕೆಯ ಕರೆಗಳು ಬರುತ್ತಿವೆ ಎಂದು ವಿವರಿಸಿದರು. ಅಲ್ಲದೆ ಇವುಗಳಲ್ಲದೆ ಅರ್ಜಿದಾರರ ಹಲ್ಲೆ ಮಾಡುವುದಾಗಿ ಓರ್ವ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಏನಾದರೂ ಮಂಡ್ಯ ಎಂಎಲ್‌ಎ ಅನುಮತಿ ಕೊಟ್ಟಿದ್ದರೆ ನಾನು ಸಮ್ಮೇಳನದ ಆ ವೇದಿಕೆಯಲ್ಲಿಯೇ ನಾಯಿಗೆ ಹೊಡೆದಂಗೆ ಹೊಡೆದು ನಿನ್ನ ಸಾಯಿಸುತ್ತಿದ್ದೆ ಎಂದು ಜೀವ ಬೆದರಿಕೆಯ ಸಂದೇಶ ಕಳುಹಿಸಿದ್ದನು ಎಂದು ಹೇಳಿದರು. ಅಂದಹಾಗೆ ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಪೀಠಕ್ಕೆ ಒದಗಿಸಲಾಗಿದೆ ಎಂದರು.

ಅಲ್ಲದೆ ಈ ವರ್ಷದ ಅಂತ್ಯದಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಅರ್ಜಿದಾರರು ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯದ ನಿಮಿತ್ತ ಅವರು ಗಡಿ ನಾಡು ಸೇರಿದಂತೆ ರಾಜ್ಯದ ವಿವಿಧೆಡೆ ಸಂಚರಿಸಬೇಕಾಗಿರುತ್ತದೆ. ಒಟ್ಟಾರೆಯಾಗಿ ಅವರ ಜೀವಕ್ಕೆ ಅಪಾಯವಿರುವುದು ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ನೀಡಬೇಕಾಗಿದೆ, ಅಲ್ಲದೆ ಈ ಮೊದಲೂ ಸಹ ಹೀಗೆ ಬೆದರಿಕೆಯ ಕರೆಗಳು ಬಂದಿದ್ದ ಹಿನ್ನೆಲೆ ಅವರಿಗೆ ರಕ್ಷಣೆ ನೀಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಆ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಸದ್ಯದ ಸ್ಥಿತಿಯಲ್ಲಿ ಅವರಿಗೆ ರಕ್ಷಣೆಯ ಅಗತ್ಯವಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಪೊಲೀಸ್‌ ರಕ್ಷಣೆಯನ್ನು ನೀಡಬೇಕು. ದಿನದ 24 ಗಂಟೆಗಳ ಕಾಲ ಗನ್‌ ಮ್ಯಾನ್‌ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಂಡ್ಯದಲ್ಲಿ ನಡೆದಿತ್ತು ಗಲಾಟೆ..

ಇನ್ನೂ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಮಹೇಶ್‌ ಜೋಶಿ ಅವರಿಗಾದ ಅನುಭವವನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ವಕೀಲರು, 2024ರ ಡಿಸೆಂಬರ್‌ 21ರಂದು ಕರೆದಿದ್ದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಆಯ್ಕೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಸ್ಥಳೀಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮದ್ದೂರಿನ ಹರ್ಷ ಪೆನ್ನದೊಡ್ಡಿ ಹಾಗೂ ಇತರರು ಯಾರ ಅನುಮತಿ ಇಲ್ಲದೆ ಸಭಾಂಗಣಕ್ಕೆ ನುಗ್ಗಿ ಗಲಾಟೆ ನಡೆಸಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಸಭೆಯಲ್ಲಿದ್ದವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಇನ್ನೂ ಈ ಘಟನೆಯ ಬಳಿಕ ಅರ್ಜದಾರರಿಗೆ ನಿರಂತರವಾಗಿ ಎಗ್ಗಿಲ್ಲದೇ ಜೀವ ಬೆದರಿಕೆಯ ಕರೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಲು ಕೋರಲಾಗಿದೆ ಎಂದು ಜೋಶಿ ಪರ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

Latest Posts

Don't Miss