Political News: ದೇಶಾದ್ಯಂತ ಕೇಂದ್ರದ ತ್ರಿಭಾಷಾ ಸೂತ್ರದ ಕುರಿತು ಪರ-ವಿರೋಧದ ಚರ್ಚೆಗಳು ಜೋರಾಗಿ ನಡೆಯುತ್ತಿರುವ ಹೊತ್ತಲ್ಲೇ ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ ತ್ರಿಭಾಷಾ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ. ಸಂಸತ್ತಿನ ಬಳಿಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಒಬ್ಬರು ವಿವಿಧ ಭಾಷೆಗಳನ್ನು ಕಲಿಯಬೇಕು ಎಂದು ಪ್ರತಿಪಾದಿಸಿದ್ದಾರೆ.
ಒಬ್ಬರು ಬಹು ಭಾಷೆಗಳನ್ನು ಕಲಿಯಬೇಕು ಎಂಬುದು ನನ್ನ ನಿಲುವು. ನನಗೂ 7-8 ಭಾಷೆಗಳು ಬರುತ್ತವೆ. ನಾನು ಕಲಿಯುವುದನ್ನು ಖುಷಿಯಿಂದ ಆನಂದಿಸುತ್ತೇನೆ. ಹೀಗಾಗಿ ಈ ತ್ರಿಭಾಷಾ ಸೂತ್ರದಿಂದ ವಿದ್ಯಾರ್ಥಿಗಳು ಕೂಡ ಸಾಕಷ್ಟು ಕಲಿಯಬಹುದು ಎಂದು ಅವರು ಹೇಳಿದ್ದಾರೆ. ಇನ್ನೂ ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ಕೇವಲ ದ್ವಿಭಾಷಾ ಸೂತ್ರಕ್ಕೆ ಕೂಗು ಕೇಳಿಬರುತ್ತಿರುವುದರ ನಡುವೆಯೇ ಸುಧಾಮೂರ್ತಿ ಈ ಹೇಳಿಕೆ ನೀಡಿದ್ದಾರೆ.
ತಮಿಳುನಾಡು ಎಂಪಿಗಳಿಗೆ ಕ್ಲಾಸ್ ತಗೊಂಡಿದ್ದ ಪ್ರಧಾನ್..
ಇನ್ನೂ ಕೇಂದ್ರ ಸರ್ಕಾರವು ದೇಶದಲ್ಲಿ ಜಾರಿಗೆ ತರಲು ಮುಂದಾಗಿರುವ ತ್ರಿಭಾಷಾ ಸೂತ್ರವನ್ನು ವಿರೋಧಿಸಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮಿಳುನಾಡು ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ನೀವೆಲ್ಲ ನಿಮ್ಮ ರಾಜಕೀಯಕ್ಕಾಗಿ ರಾಜ್ಯದ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಹೊರಟಿದ್ದೀರಿ. ನೀವು ಅಪ್ರಾಮಾಣಿಕರಾಗಿದ್ದೀರಿ, ತಮಿಳುನಾಡು ವಿದ್ಯಾರ್ಥಿಗಳ ಬಗ್ಗೆ ನಿಮಗೆ ಯಾವುದೇ ಬದ್ಧತೆ ಇಲ್ಲ. ನಿಮ್ಮ ಏಕೈಕ ಕೆಲಸವೆಂದರೆ ಭಾಷಾಧಾರಿತ ವಿವಾದಗಳನ್ನು ಹುಟ್ಟುಹಾಕುವುದು. ಅಲ್ಲದೆ ನೀವು ಕೇವಲ ರಾಜಕೀಯ ಮಾಡುತ್ತಿದ್ದೀರಿ. ನೀವೆಲ್ಲ ಪ್ರಜಾಪ್ರಭುತ್ವ ವಿರೋಧಿಗಳು ಎಂದು ಕಳೆದೆರಡು ದಿನಗಳ ಹಿಂದಷ್ಟೇ ಪ್ರಧಾನ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಪ್ರಧಾನ್ ಹೇಳಿಕೆಯಿಂದ ಸದನದಲ್ಲಿ ಕೆಲ ಕಾಲ ಕೋಲಾಹಲ ಸೃಷ್ಟಿಯಾಗಿತ್ತು. ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ ಡಿಎಂಕೆ ಸಂಸದರು ಕಲಾಪ ನಡೆಯದಂತೆ ಅಡ್ಡಿಪಡಿಸಿದ್ದರು.
ಒಟ್ನಲ್ಲಿ.. ಮೋದಿ ಸರ್ಕಾರ ತನ್ನ ಆದ್ಯತೆಗಳಲ್ಲಿ ಒಂದು ಎನ್ನುವಂತೆ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರಲು ಮುಂದಾಗಿರುವುದಕ್ಕೆ ಕಾಂಗ್ರೆಸ್, ಡಿಎಂಕೆ ಸೇರಿದಂತೆ ಇತರ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ ಕರ್ನಾಟಕದಲ್ಲೂ ಈಗಾಗಲೇ ಕೇಂದ್ರದ ಹಿಂದಿ ಹೇರಿಕೆ ನೀತಿಯನ್ನು ಕನ್ನಡಪರ ಸಂಘಟನೆಗಳು, ಕನ್ನಡ ಹೋರಾಟಗಾರರು ಖಂಡಿಸುತ್ತಿದ್ದಾರೆ. ಇನ್ನೂ ರಾಜ್ಯ ಸರ್ಕಾರವು ಸಹ ಬಹುತೇಕ ಕನ್ನಡದ ಪರ ಒಲವನ್ನು ಹೊಂದಿದೆ. ಅದರೆ ಕರ್ನಾಟಕದವರಾಗಿ, ಮೇಲಾಗಿ ತಾನೊಬ್ಬ ಹೆಮ್ಮೆಯ ಕನ್ನಡತಿ ಎನ್ನುವ ಸುಧಾಮೂರ್ತಿ ಇದೀಗ ತ್ರಿಭಾಷಾ ನೀತಿಯನ್ನು ಬೆಂಬಲಿಸಿರುವುದು ಇನ್ಯಾವ ವಿವಾದಕ್ಕೆ ಕಾರಣವಾಗಲಿದೆ..? ಈ ತ್ರಿಭಾಷಾ ವಿವಾದ ಮುಂದೆ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.