Political News: ತಾನು ಚುನಾವಣೆಯಲ್ಲಿ ಗೆದ್ದರೆ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೆನ್ನೆಯಂತೆ ರಸ್ತೆ ನಿರ್ಮಿಸುವೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ್ ಬಿಧುರಿ, ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ರಮೇಶ್ ಈ ರೀತಿ ಹೇಳಿಕೆ ನೀಡಿ, ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಈ ರೀತಿ ಮಾತನಾಡಿರುವುದು ನಾಚಿಕೆಗೇಡಿನ ವಿಷಯ ಎಂದು ಹಲವು ಕಾಂಗ್ರೆಸ್ಸಿಗರು ಕಿಡಿ ಕಾರಿದ್ದು, ಬಿಜೆಪಿ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದೆ ಎಂದಿದ್ದಾರೆ. ಇನ್ನು ಆಪ್ ಸಂಸದ ಸಂಜಯ್ ಸಿಂಗ್ ಕೂಡ ರಮೇಶ್ ಅರ ಈ ಹೇಳಿಕೆ ವಿರೋಧಿಸಿದ್ದು, ಬಿಜೆಪಿಯ ನಾಯಕತ್ವದಲ್ಲಿ ದೆಹಲಿ ಮಹಿಳೆಯರು ಸುರಕ್ಷಿತವಾಗಿ ಇರಬಹುದೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ವಿಷಾದ ವ್ಯಕ್ತಪಡಿಸಿರುವ ರಮೇಶ್ ಬಿಧುರಿ, ನಾನು ನೀಡಿರುವ ಹೇಳಿಕೆಯ ಬಗ್ಗೆ ಹಲವರು ತಪ್ಪು ತಿಳಿದುಕೊಂಡಿರುವ ಹಾಾಗಿದೆ. ಅದನ್ನು ತಮ್ಮ ಲಾಭಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನನಗೆ ಯಾವುದೇ ವ್ಯಕ್ತಿಯ ಮನಸ್ಸನ್ನು ನೋಯಿಸುವ ಆಶಯವಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಮೇಶ್ ಹೇಳಿದ್ದಾರೆ.