Tumakuru News: ತುಮಕೂರು: ಒಮ್ಮೆ ಕಾಂಗ್ರೆಸ್ ಸೇರಿ, ಮರಳಿ ಬಿಜೆಪಿಗೆ ಬಂದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಗುರುಗಳ ಆಶೀರ್ವಾದ ಪಡೆದಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶೆಟ್ಟರ್, ಗದ್ದುಗೆ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದೇನೆ. ಭಾರತೀಯ ಜನತಾ ಪಾರ್ಟಿಗೆ ಪುನರ್ ಸೇರ್ಪಡೆಯಾಗಿದ್ದೇನೆ. ನಿನ್ನೆ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿದ್ದೆ. ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು, ಮುಖಂಡರು, ನಾನು ಬಿಜೆಪಿಗೆ ಪುನರ್ ಸೇರ್ಪಡೆಯಾಗಿದ್ದಕ್ಕೆ ಪ್ರೀತಿ, ಗೌರವ ತೋರಿಸಿದ್ದಾರೆ ಎಂದರು.
ವಾಪಸ್ ಬರುವಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಒತ್ತಡ ಹಾಕುತ್ತಿದ್ದರು. ನಾನು ಯಾವುದೇ ಜಿಲ್ಲೆಗೆ ಪ್ರವಾಸಕ್ಕೆ ಹೋದಾಗ ಅಲ್ಲಿನ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದರು. ರಾಜ್ಯ ನಾಯಕರು ಮತ್ತು ರಾಷ್ಟ್ರೀಯ ನಾಯಕರು ಅದಕ್ಕೆ ಒತ್ತು ಕೊಟ್ಟರು. ಅವರು ಸಹಿತ ನೀವು ಬರ್ಬೇಕು ಎಂದು ಕರೆ ಕೊಟ್ಟಾಗ ಪಕ್ಷಕ್ಕೆ ಬಂದೆ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ, ಷರತ್ತು ರಹಿತವಾಗಿ ಪುನರ್ ಸೇರ್ಪಡೆಯಾಗಿದ್ದೇನೆ ಎಂದಿದ್ದಾರೆ.
ಅಲ್ಲದೇ, ನಿಮಗೆ ಏನು ಗೌರವ ಸ್ಥಾನ ಸಿಗಬೇಕು ಅದಬ್ನು ಕೊಡ್ತೀವಿ ಅಂತ ಹೇಳಿದ್ದಾರೆ. ಹಾಗಂತ ನಾನು ಕಾಂಗ್ರೆಸ್‌ನಲ್ಲಿ ಸ್ಥಾನ ಮಾನ ಗೌರವ ಕೊಟ್ಟಿಲ್ಲ ಅಂತ ಹೇಳೋದಿಲ್ಲ. ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ. ನಾನು ಕಾಂಗ್ರೆಸ್‌ನವರನ್ನು ಟೀಕೆ ಮಾಡಲ್ಲ, ಟೀಕೆ ಮಾಡೋದಿಲ್ಲ. ಕಾಂಗ್ರೆಸ್ ನಲ್ಲಿ ಅನ್ಯಾಯವಾಗಿದೆ ಅಂತ ಪಾರ್ಟಿ ಬಿಟ್ಟಿಲ್ಲ. ಬಿಜೆಪಿಯಲ್ಲಿ ನಾನು ೩೦-೪೦ ವರ್ಷ ದುಡಿದಿದ್ದೇನೆ. ಕಾರ್ಯಕರ್ತರ ಅಭಿಲಾಷೆಯಿಂದ ವಾಪಸ್ ಬಂದಿದ್ದೇನೆ ಎಂದು ಶೆಟ್ಟರ್ ಹೇಳಿದ್ದಾರೆ.
ಸೇರ್ಪಡೆ ಕಾರ್ಯಕ್ರಮ ತುರ್ತಾಗಿ ಆಯೋಜನೆ ಮಾಡಿದ್ದರಿಂದ, ಪ್ರಹ್ಲಾದ ಜೋಶಿಯವರು ಕಾರ್ಯಕ್ರಮಕ್ಕೆ ಬರಲು ಆಗಿಲ್ಲ. ಜೋಶಿಯವರಿಗೆ ಸಮಾಧಾನವಿದೆ. ಲಕ್ಷ್ಮಣ ಸವದಿಯವರ ಜೊತೆ ನಾನು ಸಂಪರ್ಕದಲ್ಲಿ ಇಲ್ಲ. ಅವರ ಮನಸ್ಥಿತಿ ಏನಿದ್ಯೋ ನಂಗೆ ಗೊತ್ತಿಲ್ಲ. ಮತ್ತಮ್ಮೆ ಮೋದಿಯವರು ಪ್ರಧಾನಿ ಯಾಗಬೇಕು, ಅವರಿಗಾಗಲೆ ದೇಶವನ್ನು ಬಲಿಷ್ಠ ಗೊಳಿಸಿದ್ದಾರೆ. ಇನ್ನಷ್ಟು ಬಲಿಷ್ಠಗೊಳಿಸ ಬೇಕಾಗಿದೆ. ಅವರ ಜೊತೆ ಒಂದಿಷ್ಟು ಅಳಿಲು ಸೇವೆ ಇರಲಿ ಅಂತ ಬಂದಿದ್ದೇನೆ. ಕೇಂದ್ರದಿಂದ ಐಟಿ-ಇಡಿ ಬೆದರಿಕೆ ಇದ್ದಿದ್ದರೆ ೯ ತಿಂಗಳ ಹಿಂದೆ ಮಾಡಬೇಕಿತ್ತು ಎಂದು ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
‘ನಾವು ಬಿಹಾರಕ್ಕೆ ಹೋಗೋದು ಬೇಡಾ, ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೊಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ’.