Political News: ಬಿಜೆಪಿ ನಾಯಕರು ಹೆಣದ ರಾಜಕೀಯ ಮಾಡುವುದನ್ನು ಬಿಟ್ಟರೆ ದ.ಕನ್ನಡ ಜಿಲ್ಲೆ ಸಹಜವಾಗಿಯೇ ಶಾಂತಿಯ ತಾಣವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದನ್ನು ವಿರೋಧಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆಕ್ರೋಶಭರಿತವಾದ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಅವರೇ, ಬೆಂಗಳೂರಿನ ಕೆಜೆ ಹಳ್ಳಿ-ಡಿಜೆ ಹಳ್ಳಿಯಲ್ಲಿ ದಾಂಧಲೆ ನಡೆಸಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಿಮ್ಮದೇ ಪಕ್ಷದ ಶಾಸಕರ ಮನೆಯನ್ನು ಸುಟ್ಟು ಧ್ವಂಸ ಮಾಡಿದ ರಕ್ಕಸರು ಯಾರು? ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿ ದಾಂಧಲೆ ನಡೆಸಿದ ಕೋಮುವಾದಿ ದುಷ್ಟರು ಯಾರು? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳ ಹಿಂದಿರುವ ದೇಶ ವಿದ್ವಾಂಸಕ ಶಕ್ತಿ ಯಾವುದು? ಇವರಿಗೆಲ್ಲ ನೆರವು ನೀಡುತ್ತಿರುವ ಮತಬ್ಯಾಂಕ್ ತೋಳ ವಾಗಿರುವ ರಾಜಕೀಯ ಪಕ್ಷ ಯಾವುದಾದರೂ ಇದ್ದರೆ ಅದು ನಿಮ್ಮ ಕಾಂಗ್ರೆಸ್ ಪಕ್ಷ ಎನ್ನುವುದು ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ದೇಶಕ್ಕೆ, ಜಗತ್ತಿಗೇ ತಿಳಿದಿರುವ ನಗ್ನ ಸತ್ಯ ಎಂದು ವಿಜಯೇಂದ್ರ ಹೇಳಿದ್ದಾರೆ.
ನಿಮ್ಮ ತಟ್ಟೆಯಲ್ಲಿ ಹೆಗ್ಗಣವನ್ನಿಟ್ಟುಕೊಂಡು ಇನ್ನೊಬ್ಬರ ಅಂಗಳದಲ್ಲಿ ನೊಣ ಹುಡುಕುವ ನಿಮ್ಮ ಮಾತುಗಳು ನಿಮ್ಮ ದ.ಕ.ಜಿಲ್ಲಾ ಉಸ್ತುವಾರಿ ಸಚಿವತನದ ವೈಫಲ್ಯದ ಹತಾಶೆಯ ಮಾತುಗಳಾಗಿವೆ. ಭಾರತೀಯ ಜನತಾ ಪಾರ್ಟಿ ನಿಮ್ಮ ಕಾಂಗ್ರೆಸ್ಸಿನ ರಾಷ್ಟ್ರವಿದ್ರೋಹಿ ಮನಸ್ಸಿನ ನಡವಳಿಕೆಯನ್ನು ಮೆಟ್ಟಿನಿಂತು ಮೇಲೇರಿ ಬಂದ ರಾಷ್ಟ್ರಭಕ್ತರ ರಾಜಕೀಯ ಪಕ್ಷ, ಈ ಕಾರಣಕ್ಕಾಗಿ ಇಂದು ವಿಶ್ವದಲ್ಲಿ ಭಾರತಕ್ಕೆ ಮುಂಚೂಣಿ ಜಾಗತಿಕ ಮನ್ನಣೆ ದೊರೆತಿದೆ, ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಬರುವಿಕೆಯನ್ನು ರತ್ನಗಂಬಳಿ ಹಾಸಿ ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಾಗತಿಸುತ್ತಿವೆ, ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಇಂದು ಸ್ವಾಭಿಮಾನದಿಂದ ತಲೆ ಎತ್ತಿ ನಿಂತಿದೆ ಎಂದು ಪ್ರಧಾನಿ ಪರ ವಿಜಯೇಂದ್ರ ಬ್ಯಾಟ್ ಬೀಸಿದ್ದಾರೆ.
ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಜಾತಿ-ಜಾತಿಗಳ ನಡುವೆ ಧರ್ಮ- ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಬಡವರನ್ನು ಬಡವರನ್ನಾಗಿಯೇ ಇರಿಸಿ, ದುಷ್ಟರನ್ನು ಪೋಷಿಸಿ, ರಾಷ್ಟ್ರ ವಿದ್ವಂಸಕ ಭಯೋತ್ಪಾದಕರಿಗೆ ನೀರೆರೆದು ಭಾರತವನ್ನು ನಲುಗುವಂತೆ ಮಾಡಿದ ‘ಮತ ಬಕಾಸುರ ಪಕ್ಷ’ ಯಾವುದಾದರೂ ಇದ್ದರೆ ಅದು ನಿಮ್ಮ ಕಾಂಗ್ರೆಸ್ ಪಕ್ಷ, ಇದರ ಅಡಿಯಲ್ಲಿ ನಿಮ್ಮಂತಹ ಅಧಿಕಾರ ದಾಹಿಗಳು ರಾಷ್ಟ್ರ ಹಿತ, ಜನಹಿತ, ನಾಡ ಹಿತವನ್ನು ಮರೆತು, ದುಷ್ಟ ಶಕ್ತಿಗಳನ್ನು ಫೋಷಿಸಿಕೊಂಡು ಅಧಿಕಾರ ಅನುಭವಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದೀರಿ, ಅತಿ ಶೀಘ್ರದಲ್ಲೇ ಕರ್ನಾಟಕ ರಾಜ್ಯದಲ್ಲಿ ಕಾಲವೇ ನಿಮಗೆ ಉತ್ತರ ನೀಡಲಿದೆ, ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು..?
ದ.ಕನ್ನಡ ಜಿಲ್ಲೆಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಿಲ್ಲೆಯ ಶಾಂತಿ ಕದಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನು ಬುಡಸಮೇತ ಕಿತ್ತುಹಾಕಬೇಕು ಎಂಬ ನಿಶ್ಚಿತ ನಿಲುವಿನಿಂದ ಕೋಮು ಹಿಂಸೆ ನಿಗ್ರಹ ಪಡೆ ರಚಿಸಿದೆ ಎಂದು ಹೇಳಿದ್ದರು.
ಅಲ್ಲದೇ ಹಿಂಸಾಚಾರದ ಮೂಲಕ ದ.ಕನ್ನಡ ಜಿಲ್ಲೆಯ ನೆಮ್ಮದಿ ಹಾಳು ಮಾಡುತ್ತಿರುವ ಶಕ್ತಿಗಳನ್ನು ಕೋಮು ಹಿಂಸೆ ನಿಗ್ರಹ ಪಡೆ ಮಟ್ಟ ಹಾಕಲಿದೆ. ದ.ಕನ್ನಡ ಜಿಲ್ಲೆಯ ಜನ ನಿರ್ಭೀತಿ ಹಾಗೂ ಭಯಮುಕ್ತವಾಗಿ ಜೀವನ ನಡೆಸಬೇಕು ಎಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದರು.
ಬಿಜೆಪಿ ನಾಯಕರು ಹೆಣದ ರಾಜಕೀಯ ಮಾಡುವುದನ್ನು ಬಿಟ್ಟರೆ ದ.ಕನ್ನಡ ಜಿಲ್ಲೆ ಸಹಜವಾಗಿಯೇ ಶಾಂತಿಯ ತಾಣವಾಗಲಿದೆ. ಆದರೆ ಜನರಲ್ಲಿ ಧರ್ಮದ ಅಫೀಮು ತುಂಬಿ ರಾಜಕೀಯ ಮಾಡುತ್ತಿರುವ ಬಿಜೆಪಿಯವರೆ ದ.ಕನ್ನಡ ಜಿಲ್ಲೆಯ ನೆಮ್ಮದಿ ಕಸಿಯುತ್ತಿರುವ ನಿಜವಾದ ಕಿರಾತಕರು. ಜನ ಈ ಸೂಕ್ಷ್ಮ ಅರಿಯಬೇಕು ಎಂದು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.