Friday, July 4, 2025

Latest Posts

ಭಾರತದ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆ :‌ ಪಹಲ್ಗಾಮ್‌ ದಾಳಿಗೆ ಖಂಡನೆ ; ಯಾರಿಂದ ಗೊತ್ತಾ..?

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಬಲಿ ಪಡೆದ ಘಟನೆಯನ್ನು ಜಾಗತಿಕ ಮಟ್ಟದ ರಾಷ್ಟ್ರಗಳು ಹಾಗೂ ಬಲಿಷ್ಠ ದೇಶಗಳ ನಾಯಕರು ಖಂಡಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಾಲಿಬಾನ್‌ ಭಾರತವನ್ನು ಬೆಂಬಲಿಸುವ ಮೂಲಕ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದೆ. ಅಲ್ಲದೆ ಮುಖ್ಯವಾಗಿ ಭಾರತಕ್ಕೆ ಕರೆ ಮಾಡಿ ಅಫ್ಘಾನಿಸ್ತಾನ್‌ ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಒತ್ತು ನೀಡುವಂತೆ ಮನವಿ ಮಾಡಿರುವುದು ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ.

ಇನ್ನೂ ಈ ಕುರಿತು ಖುದ್ದು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌, ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರ್ಮಿಕ ಪ್ರೇರಿತ ದಾಳಿಯಲ್ಲಿ ಪಾಕಿಸ್ತಾನದ ನಂಟು ಹೊಂದಿರುವ ಭಯೋತ್ಪಾದಕರು, 26 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪಹಲ್ಗಾಮ್‌ ದಾಳಿಯನ್ನು ಅಫ್ಘಾನಿಸ್ತಾನ ಖಂಡಿಸಿದೆ. ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಲಾಯಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅವರು ಖಂಡಿಸಿದ್ದಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಎಂದು ಅವರು ಅಫ್ಘಾನ್ ನಾಯಕನಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಎರಡೂ ದೇಶಗಳ ನಡುವಿನ ಸಹಕಾರಕ್ಕೆ ಒತ್ತು..

ಇನ್ನೂ ಚರ್ಚೆಯ ಸಮಯದಲ್ಲಿ ಅವರು ಅಫ್ಘಾನ್ ಜನರೊಂದಿಗಿನ ನಮ್ಮ ಭಾರತದ ಸಾಂಪ್ರದಾಯಿಕ ಸ್ನೇಹ ಮತ್ತು ಅದರ ಅಭಿವೃದ್ಧಿ ಅವಶ್ಯಕತೆಗಳಿಗೆ ನಿರಂತರ ಬೆಂಬಲದ ಕುರಿತು ಒತ್ತಿ ಹೇಳಿದ್ದಾರೆ. ಎರಡೂ ದೇಶಗಳ ನಡುವಿನ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಚರ್ಚಿಸಲಾಯಿತು ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ನಲ್ಲಿ ಜೈಶಂಕರ್‌ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ಪ್ರಾದೇಶಿಕ ನಡೆಯಲ್ಲಿ ಇದೊಂದು ಹೊಸ ಅಧ್ಯಾಯ ಎನ್ನಲಾಗುತ್ತಿದೆ.

ಪಾಕಿಸ್ತಾನ ಸುಳ್ಳು ಸುದ್ದಿ ಹರಡಿದೆ..

ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿನ ಘಟನೆಗಳಿಗೆ ತಾಲಿಬಾನ್ ಕಾರಣ ಎಂಬುದಾಗಿ ಪಾಕಿಸ್ತಾನ ಸುಳ್ಳು ಸುದ್ದಿ ಹರಡಿದೆ ಎಂದು ಜೈಶಂಕರ್‌ ಇದೇ ವೇಳೆ ತಿಳಿಸಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಆಧಾರರಹಿತ ವರದಿಗಳ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಅಪನಂಬಿಕೆಯನ್ನು ಸೃಷ್ಟಿಸುವ ಇತ್ತೀಚಿನ ಪ್ರಯತ್ನಗಳನ್ನು ಮತ್ತಕಿ ದೃಢವಾಗಿ ತಿರಸ್ಕರಿಸಿದ್ದಾರೆ ಎಂದು ಅವರು ಬರೆದಿದ್ದಾರೆ. ಇನ್ನೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿರುವುದು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಜೊತೆ ಭಾರತವು ನಡೆಸಿದ ಮೊಟ್ಟ ಮೊದಲ ಮಹತ್ವದ ಹಾಗೂ ಗಮನಾರ್ಹ ಮಾತುಕತೆಯಾಗಿದೆ.

ಮಾತುಕತೆಯಲ್ಲಿ ಯಾವೆಲ್ಲ ವಿಚಾರಗಳ ಪ್ರಸ್ತಾಪ..?

ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವುದು, ವ್ಯಾಪಾರವನ್ನು ಉತ್ತೇಜಿಸುವುದು ಮತ್ತು ರಾಜತಾಂತ್ರಿಕ ನಿಲುವನ್ನು ಮುಂದುವರಿಸುವ ಕುರಿತು ಜೈಶಂಕರ್ ಮತ್ತು ಮುತ್ತಕಿ ಇಬ್ಬರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ತಾಲಿಬಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮುತ್ತಕಿ ಭಾರತವನ್ನು ಒಂದು ಪ್ರಮುಖ ಪ್ರಾದೇಶಿಕ ರಾಷ್ಟ್ರ ಎಂದು ಉಲ್ಲೇಖಿಸಿ, ಅಫ್ಘಾನಿಸ್ತಾನ-ಭಾರತ ಸಂಬಂಧಗಳ ಐತಿಹಾಸಿಕ ಸ್ವರೂಪವನ್ನು ಎತ್ತಿ ತೋರಿಸಿದ್ದಾರೆ. ಉಭಯ ದೇಶಗಳ ಸಂಬಂಧಗಳು ಬಲವಾಗಿ ಬೆಳೆಯುತ್ತವೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಸಮತೋಲಿತ ವಿದೇಶಾಂಗ ನೀತಿ ಮತ್ತು ಎಲ್ಲಾ ರಾಷ್ಟ್ರಗಳೊಂದಿಗೆ ರಚನಾತ್ಮಕ ಸಂಬಂಧಗಳನ್ನು ಅನುಸರಿಸಲು ಅಫ್ಘಾನಿಸ್ತಾನದ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಫಘಾನ್ ವ್ಯಾಪಾರಿಗಳು ಮತ್ತು ರೋಗಿಗಳಿಗೆ ವೀಸಾ ನೀಡುವಲ್ಲಿ ಭಾರತದ ಸೌಲಭ್ಯಕ್ಕೆ ಮುತ್ತಕಿ ಮನವಿ ಮಾಡಿದ್ದಾರೆ. ಪ್ರಸ್ತುತ ಭಾರತದಲ್ಲಿ ಬಂಧಿಸಲ್ಪಟ್ಟಿರುವ ಅಫಘಾನ್ ಕೈದಿಗಳನ್ನು ಹಿಂದಿರುಗಿಸುವಂತೆ ಕೇಳಿಕೊಳ್ಳಲಾಗಿದೆ. ಅಫ್ಘಾನಿಸ್ತಾನದೊಂದಿಗಿನ ಭಾರತದ ಐತಿಹಾಸಿಕ ಸಂಬಂಧಗಳನ್ನು ಜೈಶಂಕರ್ ಎತ್ತಿ ತೋರಿಸಿದ್ದಾರೆ. ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಹಯೋಗದ ಮಹತ್ವವನ್ನೂ ಅವರು ಪ್ರತಿಪಾದಿಸಿದ್ದಾರೆ ಎಂದು ತಾಲಿಬಾನ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅಫ್ಘಾನ್ ಕೈದಿಗಳ ಸಮಸ್ಯೆಗೆ ತ್ವರಿತ ಗಮನ ನೀಡಲಾಗುವುದು ಮತ್ತು ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜೈಶಂಕರ್ ಮುತ್ತಕಿಯವರಿಗೆ ಭರವಸೆ ನೀಡಿದ್ದಾರೆ. ಇನ್ನೂ ಮುಖ್ಯವಾಗಿ ಪಾಕಿಸ್ತಾನದ ನೆರೆಯ ರಾಷ್ಟ್ರ ಭಾರತದ ಸಂಬಂಧವನ್ನು ಬೆಳೆಸುತ್ತಿರುವುದು ಪಾಕಿಸ್ತಾನಕ್ಕೆ ಇನ್ನಷ್ಟು ಆತಂಕ ಮೂಡಲು ಕಾರಣವಾಗಿದೆ.

- Advertisement -

Latest Posts

Don't Miss