ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್ ಬಳಗ, ಭರ್ಜರಿ ಪರ್ಫಾರ್ಮೆನ್ಸ್ ನೀಡುತ್ತಿದೆ. ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನ ಗೆದ್ದುಕೊಂಡಿರುವ ಬ್ಲೂ ಬಾಯ್ಸ್, ಸದ್ಯ ಕ್ಲೀನ್ ಸ್ವೀಪ್ ಗುರಿ ಹೊಂದಿದ್ದಾರೆ. ಈ ಹಿಂದೆ ಫ್ಲೋರಿಡಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಅದೇ ಅಂಗಳದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ 22 ರನ್ ಗಳಿಂದ ಗೆದ್ದು, ಸರಣಿಯನ್ನು ತನ್ನದಾಗಿಸಿಕೊಂಡಿತ್ತು.
ಇಂದು ಅಂತಿಮ ಪಂದ್ಯಕ್ಕಾಗಿ ತಂಡ ಸಜ್ಜಾಗುತ್ತಿದ್ದು, ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಕಳೆದೆರಡು ಪಂದ್ಯಗಳಲ್ಲಿ ಬೆಂಚ್ ಕಾಯ್ದಿದ್ದ ಕನ್ನಡಿಗ ರಾಹುಲ್ ಇಂದು ಕಣಕ್ಕಿಳಿಯುವ ಸಾದ್ಯತೆ ಇದೆ. ಮತ್ತೊಂದು ಕಡೆ ಚೊಚ್ಚಲ ಪಂದ್ಯದಲ್ಲೇ ಮಿಂಚಿದ್ದ ವೇಗಿ ನವದೀಪ್ ಸೈನಿ ಬದಲು, ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ತವರಿನಲ್ಲೇ ಬ್ಯಾಕ್ ಟು ಬ್ಯಾಕ್ ಎರಡು ಸೋಲು ಅನುಭವಿಸಿರುವ ವಿಂಡೀಸ್, ಅಂತಿಮ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ….