ಲಂಡನ್:ರಿಸಿ ಟಾಪ್ಲೆ ಅವರ ಸೊಗಸಾದ ಬೌಲಿಂಗ್ಗೆ ತತ್ತರಿಸಿದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 100 ರನ್ ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 49 ಓವರ್ ಗಳಲ್ಲಿ 246 ರನ್ ಗಳಿಗೆ ಆಲೌಟ್ ಆಯಿತು. ಭಾರತ 38.5 ಓವರ್ ಗಳಲ್ಲಿ 146 ರನ್ ಗಳಿಗೆ ಸರ್ವಪತನ ಕಂಡಿತು.
247 ರನ್ ಗಳ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಉತ್ತಮ ಆರಂಭ ಕೊಡುವಲ್ಲಿ ಎಡವಿದರು. ದಾಳಿಗಿಳಿದ ವೇಗಿ ಟಾಪ್ಲೆ ರೋಹಿತ್ ಶರ್ಮಾ (0), ಶಿಖರ್ ಧವನ್ ಅವರನ್ನು ಬಲಿ ತೆಗೆದುಕೊಂಡರು.
ನಂತರ ಬಂದ ವಿರಾಟ್ ಕೊಹ್ಲಿ (16 ರನ್ )ತಾಳ್ಮೆಯ ಬ್ಯಾಟಿಂಗ್ ಮಾಡುತ್ತಿರುವಾಗಲೇ ವಿಲ್ಲಿಗೆ ವಿಕೆಟ್ ಒಪ್ಪಿಸಿದರು. ರಿಷಬ್ ಪಂತ್ (0), ಸೂರ್ಯ ಕುಮಾರ್ 27, ಹಾರ್ದಿಕ್ ಪಾಂಡ್ಯ 29, ರವೀಂದ್ರ ಜಡೇಜಾ 29, ಶಮಿ 23, ಬುಮ್ರಾ ಅಜೇಯ 2, ಚಾಹಲ್ 3 ರನ್ ಗಳಿಸಿದರು. ಇಂಗ್ಲೆಂಡ್ ಪರ ಟಾಪ್ಲೆ 24ಕ್ಕೆ 6, ವಿಲ್ಲಿ, ಕಾರ್ಸೆ, ಮೊಯಿನ್ ಅಲಿ ಮತ್ತು ಲಿವಿಂಗ್ ಸ್ಟೋನ್ ತಲಾ ಒಂದು ವಿಕೆಟ್ ಪಡೆದರು.
ಚಾಹಲ್ ಸ್ಪಿನ್ ಮೋಡಿಗೆ ತತ್ತರಿಸಿದ ಆಂಗ್ಲರು
ಇದಕ್ಕೂ ಮುನ್ನ ಇಂಗ್ಲೆಂಡ್ ಪರ ಜಾಸನ್ ರಾಯ್ 23, ಜಾನಿ ಬೈರ್ ಸ್ಟೊ 38, ಜೋ ರೂಟ್ 11, ಬೆನ್ ಸ್ಟೋಕ್ಸ್ 21, ಜೋಸ್ ಬಟ್ಲರ್ 4, ಲಿಯಾಮ್ ಲಿವೀಂಗ್‍ಸ್ಟೋನ್ 33, ಮೊಯಿನ್ ಅಲಿ 47, ಡೇವಿಡ್ ವಿಲ್ಲಿ 41, ಕ್ರೇಗ್ ಓವರ್‍ಟನ್ ಅಜೇಯ 10, ಕಾರ್ಸೆ 2, ರೀಸಿ ಟಾಪ್ಲೆ 3 ರನ್ ಗಳಿಸಿದರು. ಇಂಗ್ಲೆಂಡ್ 49 ಓವರ್‍ಗಳಲ್ಲಿ 246 ರನ್ ಗಳಿಗೆ ಆಲೌಟ್ ಆಯಿತು. ಚಾಹಲ್ 47ಕ್ಕೆ 4 ವಿಕೆಟ್ ಪಡೆದರು, ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2, ಶಮಿ ಮತ್ತು ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಪಡೆದರು.