Friday, November 22, 2024

Latest Posts

” ಕರಾವಳಿ ದರ್ಶನ ಜಸ್ಟ್ 300 ರೂಪಾಯಿ” ಪ್ರವಾಸ ಅನುಭವ – ಸಂಗಮೇಶ್ ಮೆಣಸಿನಕಾಯಿ

- Advertisement -

ವಾ.ಕ.ರ.ಸಾ.ಸಂಸ್ಥೆಯ ಕುಮಟಾ ಘಟಕ ಕಳೆದ ಅಕ್ಟೋಬರ್‌ನಲ್ಲಿ ಕುಮಟಾ-ಗೋಕರ್ಣ-ಮಿರ್ಜಾನ ಕೋಟೆ-ಅಪ್ಸರಕೊಂಡ ಫಾಲ್ಸ್-ಇಡಗುಂಜಿ-ಮುರ್ಡೇಶ್ವರ-ಮ್ಯಾನ್‌ಗ್ರೋವ್ಸ್ ಕಾಂಡ್ಲಾ-ಎಕೊ ಬೀಚ್ ಹೊನ್ನಾವರ ನಂತರ ಕುಮಟಾಗೇ ತಂದು ಬಿಡುವ ಪ್ಯಾಕೇಜ್ ಟೂರ್ ‘ಕರಾವಳಿ ದರ್ಶನ’ ಆರಂಭಿಸಿದೆ. ಒಬ್ಬರಿಗೆ ೩೦೦ ರೂ. ನನಗೆ Ksrtc Awatar ನಲ್ಲಿ ಹುಡುಕುವಾಗ ಸಿಕ್ಕ ಈ ಪ್ಯಾಕೇಜ್‌ ಟೂರ್‌ ಬಗ್ಗೆ ಕುಮಟಾದ ಜನರಿಗೇ ಗೊತ್ತಿಲ್ಲ, ಜನ ಹೋಗಲಿ ಕುಮಟಾದ ಬಸ್ ನಿಲ್ದಾಣದ ನಿಯಂತ್ರಕರಿಗೇ ಗೊತ್ತಿರಲಿಲ್ಲ!

ಪ್ರತಿ ಶನಿವಾರ ಮತ್ತು ರವಿವಾರ ಇರುವ ಈ ಪ್ಯಾಕೇಜ್ ಟೂರ್‌ನ ಬಸ್ಸು ಎರಡು ತಿಂಗಳಿಂದ ಸಂಚಾರ ಆರಂಭಿಸಿಯೇ ಇರಲಿಲ್ಲವಂತೆ. ನಾನು ಕಳೆದ ಶನಿವಾರದ ಪ್ರವಾಸಕ್ಕೆ ಗುರುವಾರವೇ ಬುಕ್ ಮಾಡಿದ್ದೆ. ಶುಕ್ರವಾರ ಹುಬ್ಬಳ್ಳಿ ಬಿಡುವ ಮುನ್ನ ಒಮ್ಮೆ ಚೆಕ್ ಮಾಡಿದರೆ ನಾನು ಬುಕ್ ಮಾಡಿದ ನಾಲ್ಕು ಸೀಟ್ ಅಷ್ಟೇ ಇದ್ದವು. ಬಿಡುತ್ತಾರೋ ಇಲ್ಲವೋ ಎಂಬ ಅತಂಕ. ವೆಬ್‌ಸೈಟ್‌ನಲ್ಲೇ ಕೊಟ್ಟಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ‘ಬಿಡ್ತೇವೆ ಬನ್ನಿ’ ಅಂದರು ಘಟಕ ವ್ಯವಸ್ಥಾಪಕರು.

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್ ಹೀಗಿದೆ ನೋಡಿ

ನಾವು ಶುಕ್ರವಾರ ಸಂಜೆಯೇ ಬಸ್ ಮೂಲಕ ಕುಮಟಾ ತಲುಪಿ, ಒಂದು ಹೋಟೆಲ್‌ನಲ್ಲಿ ತಂಗಿ, ಶನಿವಾರ ಬೆಳಗ್ಗೆ ೭.೧೫ಕ್ಕೆ ಬಸ್ ನಿಲ್ದಾಣ ತಲುಪಿದೆವು. ‘ಪ್ಯಾಕೇಜ್ ಟೂರ್ ಬಸ್ ಎಲ್ಲಿ ನಿಲ್ಲುತ್ತೆ?” ಅಂತ ನಿಲ್ದಾಣ ನಿಯಂತ್ರಕರಿಗೆ ಕೇಳಿದರೆ, “ಅಂಥ ಬಸ್ ಯಾವುದೂ ಇಲ್ಲವಲ್ಲ” ಅಂದು ಬಿಟ್ಟರು! “ರೀ ಸ್ವಾಮಿ ಆನ್‌ಲೈನ್‌ನಲ್ಲಿ ಮೊನ್ನೆಯೇ ಬುಕ್ ಮಾಡಿ, ಬಸ್ ಬಿಡ್ತೀರಲ್ವ ಅಂತ ನಿನ್ನೆ ಮತ್ತೊಮ್ಮೆ ಫೋನ್ ಮಾಡಿ ಕನ್‌ಫರ್ಮ್ ಮಾಡಿಕೊಂಡು ಹುಬ್ಬಳ್ಳಿಯಿಂದ ಬಂದಿದ್ದೇವೆ. ಈಗ ಇಲ್ಲ ಅಂದರೆ ಹೇಗೆ?” ಅಂತ ನತಮಸ್ತಕ ಉರಿಯೊಂದಿಗೆ ಕೇಳಿದೆ. “ನೀವು ಯಾರಿಗೆ ಫೋನ್ ಮಾಡಿದ್ರಿ?” ಅಂದರು ನಿಯಂತ್ರಕರು. “ಯಾರಿಗೆ ಅಂತ ಗೊತ್ತಿಲ್ಲ. ನಿಮ್ಮ ವೆಬ್‌ಸೈಟ್‌ನಲ್ಲಿ ಕೊಟ್ಡಿರುವ ನಂಬರ್‌ಗೆ ಮಾಡಿದೆ. ಅದು ಟ್ರೂ ಕಾಲರ್‌ನಲ್ಲಿ ಕುಮಟಾ ಡಿಪೋ ಮ್ಯಾನೇಜರ್‌ ಅಂತ ತೋರಿಸ್ತು” ಅಂದೆ.

“ಹಾಗಾದರೆ ನೀವು ಅದೇ ನಂಬರ್‌ಗೆ ಫೋನ್ ಮಾಡಿ ಕೇಳಿ..‌” ಅಂತ ಆ ಕಂಟ್ರೋಲರ್ (?) ಹೇಳಿದರು. “ಪ್ಯಾಕೇಜ್ ಟೂರ್ ಅಂತ ಅನೌನ್ಸ್ ಮಾಡಿದ್ದಷ್ಟೇ, ಒಮ್ಮೆಯೂ ಬಸ್ ಓಡಿಲ್ಲ ಬಿಡಿ” ಅಂದರು ಅಲ್ಲಿ ನೆರೆದಿದ್ದ ಸಿಬ್ಬಂದಿ.

ಸರಿ, ಹಿಂದಿನ ದಿನ ಮಾಡಿದ್ದ ಸಂಖ್ಯೆಗೆ ಮತ್ತೆ ಕರೆ ಮಾಡಿ, ವಿಷಯ ತಿಳಿಸಿದೆ. “ಯಾರು, ಕಂಟ್ರೊಲರ್ರೇ ಹಾಗೆ ಹೇಳಿದರಾ? ಕೊಡಿ ಅವರಿಗೆ” ಅಂದರು ಡಿಪೊ ಮ್ಯಾನೇಜರ್. ಮೊಬೈಲ್ ಕೊಡುತ್ತಲೇ ಆ ಕಂಟ್ರೋಲರ್‌ಗೆ ಹಿಗ್ಗಾಮಗ್ಗಾ ಉಗಿದರು. ಆ ಕಂಟ್ರೋಲರ್ ಮಾತೇ ಬದಲು! “ಇಲ್ಲ ಸರ್, ನಾನು ಬಸ್ ಇಲ್ಲ ಅಂತ ಹೇಳಿಲ್ಲ, ಈಗ ಬರತ್ತೆ ಕೂತುಕೊಳ್ಳಿ ಅಂತ ಹೇಳಿದ್ದೇನೆ ಅವರಿಗೆ, ಅವರು ಕನ್‌ಫ್ಯೂಸ್ ಮಾಡಿಕೊಂಡಿರಬೇಕು!”

ನನಗೆ ಪಿತ್ಥ ನೆತ್ತಿಯಿಂದ ಮೇಲೆ ನೆಗೆಯಿತು! “ನಿಮ್ಮ ಮಂಡೆ ಸರಿ ಇಲ್ಲವಾ? ನೀವು ಮಾತಾಡಿದ್ದನ್ನು ವಿಡಿಯೊ ಮಾಡಿಕೊಂಡಿರುವೆ, ತೋರಿಸಲಾ? ನೀವು ಬಸ್ ಬರತ್ತೆ ಅಂತ ಹೇಳಿದ್ದರೆ ನಾನ್ಯಾಕೆ ಪುನಃ ಆ ನಂಬರ್‌ಗೆ ಕರೆ ಮಾಡ್ತಿದ್ದೆ. ‘ನಿಯಂತ್ರಕರು’ ಎಂಬ ಫಲಕದ ಕೆಳಗೆ ಕುಳಿತುಕೊಂಡು, ಸಂಸ್ಥೆಯ ಸಮವಸ್ತ್ರ ಹಾಕಿಕೊಂಡು ಹೀಗೆಲ್ಲ ತಪ್ಪು ಮಾಹಿತಿ ನೀಡಿ, ಮತ್ತೆ ತಿರುಗಿ ಬೀಳ್ತೀರಲ್ಲ ನಿಮ್ಮನ್ನು ಯಾವನು ಇಲ್ಲಿ ಕೂರಿಸಿದ್ದು? ಪ್ರಯಾಣಿಕರ ಜೊತೆ ಕಣ್ಣುಮುಚ್ಚಾಲೆ ಆಟ ಆಡೋ ನಿಯಂತ್ರಕರು ನೀವು…” ಎಂದೆಲ್ಲ ದಬಾಯಿಸಿದೆ.

ಕರ್ನಾಟಕ ಟಿವಿ ಡಿಸೆಂಬರ್ ಸಮೀಕ್ಷೆ | ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ

ಫೋನ್‌ನಲ್ಲಿ ಆ ಕಡೆ ಲೈನ್‌ನಲ್ಲಿದ್ದ ಡಿಪೋ ಮ್ಯಾನೇಜರ್ ಕಂಟ್ರೋಲರ್‌ಗೆ “ಈಗ ಒಂದು ತಪ್ಪು ಮಾಡಿದ್ದಲ್ಲದೇ ಮತ್ತೊಂದು ತಪ್ಪು ಮಾಡಬೇಡ. ಬಾಯಿ ಮುಚ್ಚಿಕೊಂಡು ಕೂಡು” ಅಂತಾನೂ ಸೇರಿಸಿದರು. ಆಗ ನಿಯಂತ್ರಕರು ಕ್ಷಮೆ ಕೇಳಿ, ಇಲ್ಲೇ ಕುಳಿತುಕೊಳ್ೞಿ ಬಸ್ ಬರತ್ತೆ ಅಂದರು‌. ಮುಂದೆ ಐದು ನಿಮಿಷದಲ್ಲಿ ‘ಕರಾವಳಿ ದರ್ಶನ’ ಫಲಕ ಹೊತ್ತ ಬಸ್ ಬಂತು.

ಚಾಲಕನಿಗೆ ಕೇಳಿದರೆ ನಮ್ಮನಾಲ್ಕೇ ಜನರಿಗಾಗಿ ಬಸ್ ಓಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತು. ನನ್ನ ಮಕ್ಕಳಿಗೆ ಖುಷಿ-ಇಡೀ ಬಸ್‌ಗೆ ಒಂದು ದಿನ ನಾವೇ ಮಾಲೀಕರು ಅಂತ! ನನಗೆ-ನಮ್ಮ ಮೇಡಂಗೆ ಬೇಸರ. ಮೊದಲೇ ಹಾನಿಯಲ್ಲಿರುವ ಸಂಸ್ಥೆಗೆ ನಮ್ಮಿಂದ ಮತ್ತಷ್ಟು ಹಾನಿಯಾಗುತ್ತಲ್ಲ ಅಂತ. ನಮ್ಮ ಮಾತುಗಳನ್ನು ಕೇಳಿಸಿಕೊಂಡ ಚಾಲಕ, “ಏನೂ ಯೋಚನೆ ಮಾಡಬೇಡಿ ಸರ್. ಇದು ನಿಮ್ಮಿಂದ ಆರಂಭವಾಗಿರುವ ಪ್ಯಾಕೇಜ್ ಟೂರ್. ಆರಂಭದಲ್ಲಿ ಹೀಗೇ ಇರತ್ತೆ. ಮುಂದೆ ಜನರಿಗೆಲ್ಲ ಗೊತ್ತಾದ ನಂತರ ರಷ್ ಆಗುತ್ತೆ. ನಾನೂ ಗೋಕರ್ಣದಲ್ಲಿ ನೀವು ಮಂದಿರಕ್ಕೆ ಹೋದಾಗ ಬೇರೆ ಪ್ರಯಾಣಿಕರನ್ನು ಕರೆ ತರಲು ಯತ್ನಿಸುತ್ತೇನೆ” ಅಂತ ನಮಗೇ ಸಮಾಧಾನ ಹೇಳಿದ.

ನಾನೂ ಅವನಿಗೆ ಹೇಳಿದೆ-“ಕನಿಷ್ಠ ಹತ್ತು ಸೀಟಾದರೂ ಮಾಡಿ…”

ಸರಿ, ಗೋಕರ್ಣದಲ್ಲಿ ಇಳಿದು ನಾವು ಮಂದಿರಕ್ಕೆ ಹೋಗಿ ಸರದಿಯಲ್ಲಿ ನಿಂತಾಗ ಚಾಲಕನಿಂದ ಕರೆ. “ಸರ್ ಒಟ್ಟು ೧೯ ಜನ ಸಿಕ್ಕಿದ್ದಾರೆ, ನೀವೂ ಸೇರಿ ೨೩ ಜನ ಆಯ್ತು. ನೀವು ಬೇಗ ಬನ್ನಿ ಆಯ್ತಾ” ಅಂತ. ನಾವು ಬೇಗಬೇಗ ದರ್ಶನ ಮುಗಿಸಿಕೊಂಡು ಬಸ್ ನಿಲ್ದಾಣಕ್ಕೆ ಧಾವಿಸಿ ನಮ್ಮ ಬಸ್ ಹತ್ತಿದೆವು. ಅದರಲ್ಲಿ ಆರು ಜನ ಮಹಾರಾಷ್ಟ್ರದವರು, ನಾಲ್ಕು ಜನ ಆಂಧ್ರದವರು. ಚಾಲಕನಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ, ಅವರಿಗೆ ಕನ್ನಡ ಗೊತ್ತಿಲ್ಲ. “ಸರ್ ಇವರಿಗೆ ಹಿಂದಿಯಲ್ಲಿ ಈ ಪ್ಯಾಕೇಜ್ ಟೂರ್ ಬಗ್ಗೆ ಹೇಳಬೇಕಂತೆ. ನಿಮಗೆ ಹಿಂದಿ ಗೊತ್ತಿದ್ದರೆ ಒಂಚೂರು ಹೇಳಿ ಅವರಿಗೆ…” ಅಂದ.

ನಾನು ಈ ಬಸ್ ನಮ್ಮನ್ನು ಕರೆದೊಯ್ಯುವ ಸ್ಥಳಗಳ ಬಗ್ಗೆ, ಶುಲ್ಕದ ಬಗ್ಗೆ ಹೇಳಿದೆ. ಅವರೂ, “ಇಷ್ಟೊಂದು ಸ್ಥಳಗಳಿಗೆ ಬರೀ ಮುನ್ನೂರು ರೂಪಾಯಿನಾ?” ಅಂತ ಉದ್ಗಾರ ತೆಗೆದರು. ಖುಷಿಯಿಂದ ಟಿಕೆಟ್ ಪಡೆದರು. ನಮ್ಮ ಟೂರ್‌ಗೆ ಈಗೊಂದು ಕಳೆ ಬಂತು. ಎಲ್ಲ ಸ್ಥಳಗಳಲ್ಲಿ ಇಳಿಯುವಾಗ ಚಾಲಕ ನೀಡುವ ಸಮಯವನ್ನು ನಾನು ನಮ್ಮ ಕನ್ನಡೇತರ ಸಹಪ್ರಯಾಣಿಕರಿಗೆ ವಿವರಿಸುವ ಜವಾಬ್ದಾರಿ ನನ್ನದಾಯಿತು.

ವರ್ಷದ ಕೊನೆ. ಹಾಗಾಗಿ ಎಲ್ಲ ಕಡೆ ವಿಪರೀತ ಜನಸಂದಣಿ. ಚಾಲಕ ನೀಡುತ್ತಿದ್ದ ಸಮಯದಲ್ಲಿ ವಾಪಸ್ ಬರೋದು ಕಷ್ಟವಾಗತೊಡಗಿತು. ಆ ಸಮಯ ಮುಗಿಯುತ್ತಲೇ ಚಾಲಕನಿಂದ ಎಲ್ಲರಿಗೂ ಕರೆ ಬರುತ್ತಿತ್ತು. “ಆದಷ್ಟು ಬೇಗ ಬನ್ನಿ, ಇಲ್ಲದಿದ್ದರೆ ಕೆಲವು ಸ್ಥಳಗಳನ್ನು ಡ್ರಾಪ್ ಮಾಡಬೇಕಾಗುತ್ತೆ, ಹಾಗೆ ಮಾಡಿದರೆ ನಿಮಗೇ ನಷ್ಟ” ಅಂತ ಪ್ರೀತಿಯಿಂದಲೇ ನೆನಪಿಸುತ್ತಿದ್ದ ಚಾಲಕ. ಒಂದು ಸ್ಥಳವನ್ನೂ ಮಿಸ್ ಮಾಡಲಿಲ್ಲ. ಸಂಜೆ ಒಂದು ಗಂಟೆ ಲೇಟಾದರೂ ಸಹನೆಯಿಂದ, ನಗುಮೊಗದಿಂದ ಕುಮಟಾಗೆ ತಂದುಬಿಟ್ಟ ಚಾಲಕ. ಆದರೆ ನಮ್ಮ ಜೊತೆ ಫೋಟೊಗೆ ಮಾತ್ರ ಬರಲಿಲ್ಲ. “ಅದು ನಾನು ಡ್ಯೂಟಿ ಮೇಲೆ ನಿಮ್ಮ ಜೊತೆ ಫೋಟೊಗೆ ನಿಂತುಕೊಳ್ಳೋದು ಸರಿ ಅಲ್ಲ ಸರ್, ನೀವು ತೆಕ್ಜೊಳ್ಳಿ ತೊಂದರೆ ಇಲ್ಲ” ಅಂತ್ಹೇಳಿ ನಯವಾಗಿ ಜಾರಿಕೊಂಡ.

ಇವನು ಇಷ್ಟು ಚೆನ್ನಾಗಿ ವ್ಯವಹರಿಸುತ್ತಿದ್ದಾನೆ ಅಂದರೆ ಸಂಜೆ ಎಲ್ಲರ ಬಳಿ ‘ಖುಷಿ’ ಅಥವಾ “ಕಾಫಿಗಾಗಿ ಕಾಸು’ ಕೇಳಬಹುದು ಅಂದುಕೊಂಡಿದ್ದೆ. ನನ್ನ ಊಹೆ ಸುಳ್ಳಾಗಿತ್ತು. ಅವನು ಒಬ್ಬರಿಗೂ ಒಂದು ಪೈಸೆ ಕೇಳಲಿಲ್ಲ. ಬದಲಿಗೆ, ” ಇಲ್ಲಿಂದ ಇಂಥಾದೊಂದು ಟೂರ್ ಇದೆ ಅಂತ ನಿಮ್ಮ ಫ್ರೆಂಡ್ಸ್‌ಗೆಲ್ಲ ಹೇಳಿ ಸರ್” ಅಂತ ವಿನಂತಿಸಿದೆ. ಬೆಳಗ್ಗೆಯಿಂದ ನಾನೂ ಅವನ ಜೊತೆ ರಿವರ್ಸ್ ತೊಗೊಳ್ಳುವ, ಮತ್ತಿತರ ಸಂದರ್ಭಗಳಲ್ಲಿ ‘ಕಂಡಕ್ಟರ್’ ಕೆಲಸ ಮಾಡಿದ್ದರಿಂದ “ನಿಮ್ಮ ಸಹಕಾರದಿಂದ ಟೂರ್ ಚೆಂದ ಅಯಿತು ಸರ್. ಥ್ಯಾಂಕ್ಸ್ ನಿಮಗೆ ಆಯ್ತಾ” ಅಂದ.

ಪ್ರಾಂತ್ಯವಾರು ಯಾವ ಪಕ್ಷಕ್ಕೆ ಎಷ್ಟು ಸೀಟು.? ಕಲ್ಯಾಣ ಕರ್ನಾಟಕ..

ಇನ್ ಫ್ಯಾಕ್ಟ್ ಅವನಿಗೆ ಸಹಕರಿಸೋದರಲ್ಲಿ ನಾನು ಎಂಜಾಯ್ ಮಾಡಿದ್ದೆ 😁

ಇಂಥ ಟೂರ್‌ಗಳಲ್ಲಿ ಸಿಗುವ ಸಹಪ್ರಯಾಣಿಕರು ಒಮ್ಮೊಮ್ಮೆ ಶಾಶ್ವತ ಸಂಪರ್ಕದಲ್ಲಿ ಉಳಿದುಬಿಡುತ್ತಾರೆ. ಈ ಬಸ್‌ನಲ್ಲಿ ಸಿಕ್ಕಿದ ಮಂಡ್ಯದ ಮೂವರು ಯುವತಿಯರು ನಾನು ಈ ಬಸ್‌ಅನ್ನು ಹೇಗೆ ಪತ್ತೆ ಮಾಡಿದೆ ಎಂಬುದರ ಬಗ್ಗೆ ಕೇಳಿತಿಳಿದುಕೊಂಡರು. ಅಷ್ಟೇ ಅಲ್ಲ, ನಮ್ಮ ಮೇಡಂ ಜೊತೆ, ಮಗಳ ಜೊತೆ ಒಳ್ಳೆಯ ಫ್ರೆಂಡ್ಸ್ ಆಗಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಹೋಗಿದ್ದಾರೆ. ಇನ್ನು ಮೇಲೆ ಎಲ್ಲಾದರೂ ಟೂರ್‌ಗೆ ಹೊರಟರೆ ಒಮ್ಮೆ ನಮ್ಮ ಸಲಹೆ ಪಡೆಯುತ್ತಾರಂತೆ 😁. ಬೆಂಗಳೂರಿಂದ ಬಂದಿದ್ದ ಆಂಧ್ರ ಮೂಲದ ಒಬ್ಬ ಟೆಕಿ ನನ್ನ ನಂಬರ್ ತೊಗೊಂಡು ಹೋಗಿದ್ದಾರೆ 😁

ಸಾರಿಗೆ ಸಂಸ್ಥೆ ಈ ಪ್ಯಾಕೇಜ್ ಟೂರನ್ನು ಅಕ್ಟೋಬರ್‌ನಲ್ಲೇ ಘೋಷಿಸಿದ್ದರೂ ಒಮ್ಮೆಯೂ ಬಸ್ ಓಡಿಸಿರಲಿಲ್ಲ. ಕಾರಣ ಯಾವ ಪ್ರಯಾಣಿಕರೂ ಈ ಟೂರ್‌ಗೆ ಬುಕ್ ಮಾಡಿರಲಿಲ್ಲ. ಕಾರಣ ಮಾಹಿತಿಯ ಕೊರತೆ. ಅಲ್ಲಿ ನಮ್ಮ ಜೊತೆ ಬಂದಿದ್ದ ಇತರ ಪ್ರಯಾಣಿಕರು ಈ ಬಸ್ ಓಡಿಸಲು ನಾನು ಕಾರಣ ಅಂತ ಚಾಲಕ ಹೇಳಿದ್ದಕ್ಕೆ ನನಗೆ ಥ್ಯಾಂಕ್ಸ್ ಹೇಳಿದರು! ಅಂದರೆ ಸಂಸ್ಥೆಯ ಇಂಥ ಟೂರ್‌ಗಳಿಗೆ ಜನರ ಸ್ಪಂದನೆ ಸಿಗತ್ತೆ. ಆದರೆ ಸಂಸ್ಥೆ ಇಂಥ ಸೇವೆಗಳನ್ಬು ವ್ಯವಸ್ಥಿತವಾಗಿ ಮಾಡಬೇಕಷ್ಟೇ.

ನಾವು ಸರಕಾರಿ ಸೇವೆಗಳಿಗೆ ಎಷ್ಟೇ ಬೈಯಲಿ, ನಿಂದಿಸಲಿ, ಅವು ನಮ್ಮ ಸೇವೆಗಳೇ. ಬರೀ ದೂಷಿಸುವುದರಿಂದ ಪ್ರಯೋಜನವಿಲ್ಲ.ಅವುಗಳ ಸುಧಾರಣೆಗೆ ನಮ್ಮ ಕೈಲಾದ ಪ್ರಯತ್ನ ಮಾಡಬೇಕು.

- Advertisement -

Latest Posts

Don't Miss