ವಿವಾಹವಾದ ಪ್ರತೀ ಹೆಣ್ಣು ಬಯಸುವ ಭಾಗ್ಯವೆಂದರೆ, ಸಂತಾನ ಭಾಗ್ಯ. ಯಾಕಂದ್ರೆ ಮಕ್ಕಳಿಲ್ಲದಿದ್ದವರನ್ನ ಈ ಪ್ರಪಂಚ ಮಾಡುವ ಅವಮಾನ ಅಷ್ಟಿಷ್ಟಲ್ಲ. ಹಾಗಾಗಿ ಪ್ರತೀ ಹೆಣ್ಣು ವಿವಾಹದ ನಂತರ, ಮುದ್ದಾದ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಹೀಗೆ ಎಷ್ಟೇ ಚಿಕಿತ್ಸೆ ಪಡೆದರೂ, ಎಷ್ಟು ಪ್ರಾರ್ಥಿಸಿದರೂ ಮಕ್ಕಳಾಗದಿದ್ದಲ್ಲಿ, ಈ ಸ್ಥಳಕ್ಕೆ ಬಂದು, ಇಲ್ಲಿರುವ ಕೊಳದಲ್ಲಿ ಸ್ನಾನ ಮಾಡಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಯಾವುದು ಆ ಸ್ಥಳ ಎನ್ನುವ ಬಗ್ಗೆ ತಿಳಿಯೋಣ ಬನ್ನಿ..
ಬಿಹಾರದ ದರ್ಭಂಗಾ ಎಂಬಲ್ಲಿ ನಡೆಯುವ ಜಾತ್ರೆಯಲ್ಲಿ ಭಾಗವಹಿಸಿ, ಅಲ್ಲಿರುವ ಕಮಲಾ ನದಿಯಲ್ಲಿ ದಂಪತಿಗಳು ಮಿಂದರೆ, ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ಪ್ರತೀ ವರ್ಷ ಕಾರ್ತಿಕ ಹುಣ್ಣಿಮೆಯಂದು ಜೀವಛ ಘಾಟ್ ಜಾತ್ರೆ ನಡೆಯುತ್ತದೆ. ಈ ದಿನ ಸಾವಿರಾರು ಜನ ಸಂತಾನಾಪೇಕ್ಷಿಗಳು ಕಮಲಾ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ. ಹಾಗೆ ಸ್ನಾನ ಮಾಡಿ ಹೋದವರಲ್ಲಿ ಅನೇಕ ದಂಪತಿಗಳು ಮಕ್ಕಳು ಪಡೆದ ಉದಾಹರಣೆಗಳು ಇವೆಯಂತೆ. ಹಾಗಾಗಿ ಜನ ಕಮಲಾ ನದಿಯಲ್ಲಿ ಮಿಂದರೆ, ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯನ್ನಿಟ್ಟಿದ್ದಾರೆ.
ಗಂಡ ಹೆಂಡತಿ ಇಬ್ಬರೂ ಕೈ ಕೈ ಹಿಡಿದು ನೀರಿಗಿಳಿದು, ಮೂರು ಬಾರಿ ಮುಳುಗೇಳಬೇಕು. ಮತ್ತು ದೇವರಲ್ಲಿ ಸಂತಾನಕ್ಕಾಗಿ ಪ್ರಾರ್ಥಿಸಬೇಕು. ಹಾಗೆ ಮಾಡಿದ್ದಲ್ಲಿ ಸಂತಾನ ಸಮಸ್ಯೆ ದೂರವಾಗುತ್ತದೆ ಎನ್ನಲಾಗಿದೆ. ಅಲ್ಲದೇ ತಮ್ಮ ಮಕ್ಕಳಿಗೆ ಅಕಾಲಿಕ ಮರಣವಿದೆ ಎಂದು ಗೊತ್ತಾಗಿದ್ದಲ್ಲಿ, ಆ ಮಗುವಿನ ತಂದೆ ತಾಯಿ ಈ ಕೊಳದಲ್ಲಿ ಮಿಂದೆದ್ದರೆ, ಆ ಮಕ್ಕಳ ಆಯುಷ್ಯ ಹೆಚ್ಚುತ್ತದೆ ಎಂದು ಹೇಳುತ್ತಾರೆ.
ಕರ್ನಾಟಕದಲ್ಲಿಯೂ ಸಂತಾನ ಭಾಗ್ಯ ನೀಡುವ ದೇವಸ್ಥಾನಗಳಿದೆ. ರಾಮನಗರದಲ್ಲಿರುವ ರಾಮ ಪ್ರಮೇಯ ದೇವಸ್ಥಾನದಲ್ಲಿ ಅಂಬೇಗಾಲು ಕೃಷ್ಣನ ಮೂರ್ತಿ ಇದೆ. ಕರ್ನಾಟಕದಲ್ಲಿ ಇರುವ ಏಕೈಕ ಅಂಬೇಗಾಲು ಕೃಷ್ಣನ ಮೂರ್ತಿ ಅದು. ಜಗದೋದ್ಧಾರನ ಆಡಿಸಿದಳೆಶೋಧೆ ಎಂಬ ಗೀತೆ ರಚನೆಯಾಗಿದ್ದೇ ಇಲ್ಲಿ. ದಾಸ ವರೇಣ್ಯರಾದ ಕನಕದಾಸರು, ಕೃಷ್ಣನಿಗಾಗಿ ಹಾಡನ್ನು ರಚಿಸಿ ಹಾಡಿದ್ದರು ಎಂದು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಬಂದು ತೊಟ್ಟಿಲು ಕೊಡುತ್ತೇನೆಂದು ಬೇಡಿಕೊಂಡರೆ, ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.