ಹಣ ಅಂದ್ರೆ ಹೆಣನೂ ಬಾಯಿ ಬಿಡತ್ತೆ ಅಂತಾ ಹಿರಿಯರು ಗಾದೆ ಮಾತನ್ನ ಹೇಳಿದ್ದಾರೆ. ಇದು ನಿಜವೂ ಹೌದು. ಹಣ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜನ ದುಡಿಯೋದೇ ಹಣಕ್ಕಾಗಿ. ಹಣವೊಂದಿದ್ರೆ ಸಾಕು. ನಾವು ಅಂದುಕೊಂಡದ್ದೆಲ್ಲ ಖರೀದಿಸಬಹುದು, ಇಷ್ಟಪಟ್ಟದನ್ನ ತಿನ್ನಬಹುದು, ಇಷ್ಟಬಂದಲ್ಲಿ ಹೋಗಬಹುದು. ಮನುಷ್ಯನ ಎಲ್ಲಾ ಆಸೆ ಆಕಾಂಕ್ಷೆ ಪೂರೈಸುವುದೇ ಈ ಹಣ. ಅಂಥ ಹಣ ನಿಮ್ಮ ಪಾಲಾಗಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಬೇಕು. ಇದು ಯಾವ ದೇವಸ್ಥಾನ..? ಈ ದೇವಸ್ಥಾನ ಇರೋದಾದ್ರೂ ಎಲ್ಲಿ..? ಅಷ್ಟಕ್ಕೂ ಇಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಾವಿವತ್ತು ಹೇಳೋಕ್ಕೆ ಹೊರಟಿರೋ ದೇವಸ್ಥಾನದಲ್ಲಿ ಕುಬೇರ ಮತ್ತು ಲಕ್ಷ್ಮೀಯನ್ನ ಪೂಜಿಸುತ್ತಾರೆ. ಕಳೆದ ಜನ್ಮದಲ್ಲಿ ಕಳ್ಳನಾಗಿದ್ದ ಕುಬೇರ, ನಂತರದಲ್ಲಿ ಶಿವನ ಕೃಪೆಗೆ ಪಾತ್ರನಾಗಿ ಮುಂದಿನ ಜನ್ಮದಲ್ಲಿ ಕುಬೇರನಾಗಿ ಜನಿಸಿದ. ಹಾಗೆ ಜನಿಸಿದ ಕುಬೇರ ಶ್ರೀನಿವಾಸನಿಗೂ ಸಾಲ ಕೊಡುವಷ್ಟು ಶ್ರೀಮಂತನಾಗಿದ್ದ. ತಿರುಪತಿ ಇಂದಿಗೂ ಕೂಡ ಭಕ್ತರ ಸಹಾಯದಿಂದ ಕುಬೇರನ ಸಾಲ ತೀರಿಸುತ್ತಿದ್ದಾನೆ. ಅಂದ ಹಾಗೆ ಈ ದೇವಸ್ಥಾನ ಇರುವುದು ಚೆನ್ನೈನ ರತ್ನಮಂಗಲಂ ವಂಡಲೂರಿನಲ್ಲಿದೆ. ತಿರುಪತಿ ದರ್ಶನ ಮಾಡುವವರು ಅದಕ್ಕೂ ಮುನ್ನ ಕುಬೇರನ ದರ್ಶನ ಮಾಡಬೇಕಂತೆ.
ಈ ದೇವಸ್ಥಾನದಲ್ಲಿ ಕುಬೇರ ಮತ್ತು ಲಕ್ಷ್ಮೀ ದೇವಿಯನ್ನು ಒಂದೇ ಕಡೆ ನಾವು ನೋಡಬಹುದು. ಇವರಿಬ್ಬರಿಗೂ ಪ್ರತಿದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪುರಾಣ ಕಥೆಗಳಲ್ಲಿ ನಾವು ನೀವೆಲ್ಲ ಕುಬೇರನ ಕಥೆ ಕೇಳಿರ್ತಿವಿ. ಕುಬೇರನಿಗೆ ಲಕ್ಷ್ಮೀ ದೇವಿಯೇ ಬುದ್ಧಿ ಹೇಳುತ್ತಾಳೆ. ಹಾಗಾಗಿ ಆಕೆಯನ್ನು ಕುಬೇರ ಅಕ್ಕನ ರೂಪದಲ್ಲಿ ಕಾಣುತ್ತಾನೆ. ಧನಕ್ಕೆ ಲಕ್ಷ್ಮೀಯೇ ಅಧಿದೇವತೆ. ಅಂತೆಯೇ ಕುಬೇರ ಶ್ರೀಮಂತನಷ್ಟೇ. ಇನ್ನು ಭಕ್ತರು ಇವರಿಬ್ಬರ ಫೋಟೋವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಧನ ಸಂಪತ್ತು ಅವರ ಪಾಲಾಗುತ್ತದೆ ಅನ್ನೋ ನಂಬಿಕೆ ಇದೆ.
ಶ್ರೀಮಂತರು ಈ ದೇವಸ್ಥಾನಕ್ಕೆ ಬರುವಾಗ ಬೆಲೆ ಬಾಳುವ ಕಾಣಿಕೆಯನ್ನೇ ಹಾಕುತ್ತಾರೆ. ಭಾರತದಲ್ಲಿರುವ ಏಕೈಕ ಲಕ್ಷ್ಮೀ ಕುಬೇರ ದೇವಸ್ಥಾನ ಇದಾಗಿದೆ. ಇನ್ನು ಇಲ್ಲಿ ಕುಬೇರ ಮತ್ತು ಲಕ್ಷ್ಮೀ ದೇವಿಯ ಜೊತೆಗೆ, ಗಣೇಶ, ಸುಬ್ರಹ್ಮಣ್ಯ, ಹನುಮಂತ, ಶಿವನನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಶ್ರೀಮಂತಿಕೆ ನೀಡು ಎಂದು ಬೇಡುತ್ತಾರೆ. ತಮ್ಮ ಕಳೆದು ಹೋದ ಮುಖ್ಯವಾದ ಒಡವೆ ವಸ್ತ್ರ, ಹಣವು ಮರಳಿ ಬರಲಿ ಎಂದು ಬೇಡಿಕೊಳ್ಳುತ್ತಾರೆ. ಹಲವರು ಈ ದೇವರ ಆಶೀರ್ವಾದದಿಂದ ತಮ್ಮ ಕಳೆದು ಹೋದ ಹಣ, ಒಡವೆಗಳನ್ನ ಹಿಂಪಡೆದಿದ್ದಾರೆ. ಅಲ್ಲದೇ ಶ್ರೀಮಂತರೂ ಆಗಿದ್ದಾರೆ. ಅಂಥವರು ಈ ದೇವಸ್ಥಾನಕ್‌ಕೆ ಬಂದು ಭೇಟಿ ನೀಡಿ ಧನ್ಯವಾದ ಅರ್ಪಿಸಿ ಹೋಗುತ್ತಾರೆ.