ನಾವು ಭಾಗ ಒಂದು, ಎರಡು ಮತ್ತು ಮೂರರಲ್ಲಿ ಶಿವನ 19 ಅವತಾರದಲ್ಲಿ 12 ಅವತಾರಗಳ ಬಗ್ಗೆ ಹೇಳಿದ್ದೇವೆ. ಈಗ ಮುಂದುವರಿದ ಭಾಗವಾಗಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಶಿವ ತಾಳಿದ ಆ ಅವತಾರಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹದಿಮೂರನೇ ಅವತಾರ ಅವಧೂತ ಅವತಾರ. ಇಂದ್ರನ ಅಹಂಕಾರವನ್ನು ನಾಶ ಮಾಡಲು ಶಿವ ಈ ಅವತಾರವನ್ನು ಎತ್ತಿದರು. ಇಂದ್ರ ಉಳಿದ ದೇವತೆಗಳೊಂದಿಗೆ ಸೇರಿ, ಮಹಾದೇವನ ದರ್ಶನಕ್ಕಾಗಿ ಕೈಲಾಸ ಪರ್ವತಕ್ಕೆ ತೆರಳುತ್ತಿದ್ದರು. ಆಗ ಇಂದ್ರನನ್ನು ಪರೀಕ್ಷಿಸಲು ಮಹಾದೇವ ಅವಧೂತನ ರೂಪದಲ್ಲಿ ಬಂದ. ಇಂದ್ರ ನೀನಾರು ಎಂದು ಎಷ್ಟೇ ಕೇಳಿದರೂ, ಶಿವ ಮಾತ್ರ ಸುಮ್ಮನಿದ್ದ. ಆಗ ಇಂದ್ರೆ ತನ್ನ ವಜ್ರಾಯುಧವನ್ನು ತೆಗೆದು ಅವಧೂತನ ಮೇಲೆ ಪ್ರಹಾರ ಮಾಡಲು ಯತ್ನಿಸಿದ. ಆಗ ಅವನ ಕೈ ಭಾರವಾಯಿತು. ಆಗ ಇಂದ್ರನಿಗೆ ಅವಧೂತನೇ ಮಹದೇವನೆನ್ನುವ ಸತ್ಯದ ಅರಿವಾಯಿತು. ಆಗ ಇಂದ್ರ, ಶಿವನ ಶ್ಲೋಕವನ್ನು ಪಠಿಸಿ, ಕ್ಷಮೆಯಾಚಿಸಿದ.
ಹದಿನಾಲ್ಕನೇ ಅವತಾರ ಭಿಕ್ಷುವರ್ಯ ಅವತಾರ. ಧರ್ಮಗ್ರಂಥದ ಅನುಸಾರ, ವಿದರ್ಭ ನರೇಶ ಸತ್ಯರಥನನ್ನು ಶತ್ರುಗಳು ಸಾಯಿಸಿದ್ದರು. ಅವನ ಗರ್ಭಿಣಿ ಪತ್ನಿ ಅಲ್ಲಿಂದ ಹೇಗೋ ಜೀವ ಉಳಿಸಿಕೊಂಡು ಬಂದಿದ್ದಳು. ಆಕೆಗೆ ಪುತ್ರ ಜನಿಸಿದ. ಒಮ್ಮೆ ಆಕೆ ನೀರು ಕುಡಿಯಲು ನದಿಗೆ ಹೋದಾಗ ಮೊಸಳೆಯ ಬಾಲಿಗೆ ಬಲಿಯಾದಳು. ಆಗ ಶಿವ ಓರ್ವ ಭಿಕ್ಷುಕಿಗೆ ಆ ಬಾಲಕನನ್ನು ಕೊಟ್ಟು, ಇವನ ಪಾಲನೆ ಪೋಷಣೆ ಮಾಡಬೇಕೆಂದು ಹೇಳಿದ. ಆ ಬಾಲಕನೇ ಭಿಕ್ಷುವರ್ಯ. ಅವನಲ್ಲಿ ಶಿವನ ಅಂಶವಿತ್ತು.
ಹದಿನೈದನೇ ಅವತಾರ ಸುರೇಶ್ವರ ಅವತಾರ. ಉಪಮನ್ಯು ಎಂಬ ಬಾಲಕನಿಗೆ ಹಾಲು ಕುಡಿಯುವ ಆಸೆ ಇತ್ತು. ಆದ್ರೆ ಅವನು ತನ್ನ ಮಾವನ ಮನೆಯಲ್ಲಿದ್ದ ಕಾರಣ, ಅವನಿಗೆ ಕುಡಿಯಲು ಸರಿಯಾಗಿ ಹಾಲು ಸಿಗುತ್ತಿರಲಿಲ್ಲ. ಆಗ ಅವನ ತಾಯಿ, ಶಿವನನ್ನು ಪ್ರಾರ್ಥಿಸು ಎನ್ನುತ್ತಾಳೆ. ಉಪಮನ್ಯು ಹಾಗೆ ಮಾಡುತ್ತಾನೆ. ಆಗ ಶಿವ ಸುರೇಶ್ವರನ ಅವತಾರದಲ್ಲಿ ಪ್ರತ್ಯಕ್ಷನಾಗಿ, ಶಿವನನ್ನು ಹಿಗ್ಗಾಮುಗ್ಗಾ ಬಯ್ಯುತ್ತಾನೆ. ಆಗ ಕೋಪಗೊಂಡ ಉಪಮನ್ಯು, ಅವನಿಗೆ ಹೊಡೆಯಲು ಬರುತ್ತಾನೆ. ಆಗ ಸುರೇಶ್ವರ ತನ್ನ ನಿಜರೂಪ ತೋರಿಸಿ, ಉಪಮನ್ಯುಗೆ ಕ್ಷೀರ ಸಾಗರವನ್ನೇ ವರವಾಗಿ ನೀಡುತ್ತಾನೆ.
ಹದಿನಾರನೇ ಅವತಾರ ಕಿರಾತ ಅವತಾರ. ಶಿವ ಶಂಕರನನ್ನು ಪ್ರಸನ್ನಗೊಳಿಸುವುದಕ್ಕಾಗಿ ಅರ್ಜುನ ಕಾಡಿನಲ್ಲಿ ತಪಸ್ಸು ಮಾಡುತ್ತಿರಬೇಕಾದರೆ, ದುರ್ಯೋಧನ ಆ ತಪಸ್ಸನ್ನು ಹಾಳು ಮಾಡಬೇಕೆಂದು ಕಾಡು ಹಂದಿಯನ್ನು ಕಳುಹಿಸಿದನು. ಅದನ್ನು ಕೊಲ್ಲಲು ಅರ್ಜುನ ಬಾಣ ಬಿಟ್ಟ. ಅದೇ ಸಮಯಕ್ಕೆ ಸರಿಯಾಗಿ ಕಿರಾತ ವೇಷ ಧರಿಸಿದ್ದ ಶಿವನು ಆ ಕಾಡು ಹಂದಿಯ ಮೇಲೆ ಬಾಣ ಬಿಟ್ಟ. ಅರ್ಜುನನಿಗೆ ಆ ಕಿರಾತ ಶಿವನೆಂದು ಗೊತ್ತಾಗಲಿಲ್ಲ. ನಾನು ಬಾಣ ಬಿಟ್ಟಿದ್ದಕ್ಕಾಗಿ ಆ ಹಂದಿ ಸತ್ತಿತು ಎಂದು ಇಬ್ಬರೂ ವಾದಕ್ಕೆ ಬಿದ್ದರೂ. ಅರ್ಜುನನ ಆತ್ಮವಿಶ್ವಾಸ ಕಂಡು ಶಿವ ಮೆಚ್ಚಿ, ಕೌರವರ ವಿರುದ್ಧ ಜಯವಾಗಲಿ ಎಂದು ಆಶೀರ್ವಾದವನ್ನಿತ್ತರು.
ಉಳಿದ ಅವತಾರಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಯೋಣ.