ನಾವು ನೀವೆಲ್ಲ ನಮ್ಮವರು ಅಥವಾ ನಮಗೆ ಬೇಕಾದವರು ತೀರಿಹೋದರೆ, ಕಣ್ಣೀರು ಹಾಕುತ್ತೇವೆ. ಸಂತಾಪ ವ್ಯಕ್ತಪಡಿಸುತ್ತೇವೆ. ಆದರೆ ಕೆಲವರು ತಮಗೆ ಬೇಕಾದವರು ತೀರಿಹೋದರೆ, ಖುಷಿ ಪಡುತ್ತಾರೆ. ಅಲ್ಲದೇ ಅವರ ಅಂತ್ಯ ಸಂಸ್ಕಾರವನ್ನು ರಾತ್ರಿಯೇ ಮಾಡುತ್ತಾರೆ. ಯಾಕೆ ಹೀಗೆ..? ಅಷ್ಟಕ್ಕೂ ಯಾರವರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಾವಿಂದು ಹೇಳಹೊರಟಿರುವುದು ಮಂಗಳಮುಖಿಯರ ಬಗ್ಗೆ. ಮಂಗಳಮುಖಿಯರ ಅಂತ್ಯಸಂಸ್ಕಾರವನ್ನು ರಾತ್ರಿ ಮಾಡಲಾಗತ್ತೆ. ಮತ್ತು ಅವರಿಗೆ ಬೇಕಾದವರು, ಅವರು ಸತ್ತ ಬಳಿಕ ಸಂಭ್ರಮಿಸುತ್ತಾರೆ. ತಮ್ಮ ಗೆಳತಿ ಸತ್ತಳೆಂದು ಖುಷಿ ಪಡುತ್ತಾರೆ. ಎಂಥ ಜನ ಇವರು, ತಮ್ಮವರು ಸತ್ತರೆ ಖುಷಿ ಪಡುತ್ತಾರಲ್ಲ ಅಂತಾ ನೀವು ಕೋಪಗೊಳ್ಳಬಹುದು. ಆದ್ರೆ ಇವರು ಹೀಗೆ ಮಾಡುವುದರ ಹಿಂದೆ ಒಂದು ಕಾರಣವಿದೆ. ಅದೇನಂದ್ರೆ ಈ ಮಂಗಳಮುಖಿ ಜೀವನದಿಂದ ಅವರಿಗೆ ಮುಕ್ತಿ ಸಿಕ್ಕಿದೆ. ಮುಂದಿನ ಜನ್ಮದಲ್ಲಾದರೂ ಅವರು ಯಾವುದಾದರೂ ಒಂದು ಲಿಂಗದವರಾಗಿ ಹುಟ್ಟಲಿ ಎಂಬುದೇ ಉಳಿದ ಮಂಗಳಮುಖಿಯರ ಆಶಯವಾಗಿರುತ್ತದೆ.
ನಾವು ನೀವು ನೋಡಿರುವಂತೆ ಮಂಗಳಮುಖಿಯರನ್ನ ನೋಡಿದ್ರೆ ಹಲವರು ಹೆದರುತ್ತಾರೆ. ಇನ್ನು ಕೆಲವರು ಅವರನ್ನ ಕೀಳಾಗಿ ನೋಡ್ತಾರೆ. ಶೇಖಡ 10ರಷ್ಟು ಮಂಗಳಮುಖಿಯರಷ್ಟೇ ಶಿಕ್ಷಣ ಪಡೆದು ಉನ್ನತ ಸ್ಥಿತಿಗೇರುತ್ತಾರೆ. ಆದ್ರೆ ಉಳಿದವರಿಗೆ ಕುಟುಂಬಸ್ಥರ ಸಾಥ್ ಸಿಗುವುದಿಲ್ಲ, ಹಾಗಾಗಿ ಅವರು ತಮ್ಮ ಗುಂಪಿನವರೊಂದಿಗೆ ಸೇರಬೇಕು. ಅದೊಂದು ನರಕದ ಜೀವನವಾಗಿದ್ದು, ಈ ಜೀವನದಿಂದ ತಮ್ಮ ಗೆಳತಿಗೆ ಮುಕ್ತಿ ಸಿಕ್ಕಿತಲ್ಲ ಎಂದು ಅವರು ಖುಷಿ ಪಡುತ್ತಾರೆ. ಇನ್ನು ಸಾವಿನ ವಿಷಯದ ಬಗ್ಗೆ ತಿಳಿಸಬೇಕೆಂದರೆ, ಇವರು ಶಿವನ ಅಂಶವಾಗಿರುವ ಕಾರಣ, ಇವರಿಗೆ ತಮ್ಮ ಸಾವು ಹತ್ತಿರ ಬಂತು ಎಂದು ಗೊತ್ತಾದಾಗ, ಇವರು ಆಹಾರ ತ್ಯಜಿಸುತ್ತಾರೆ. ಬರಿ ನೀರಷ್ಟೇ ಕುಡಿಯುತ್ತಾರೆ. ಶಿವನ ಸ್ಮರಣೆ ಮಾಡುತ್ತಾರೆ.
ಇನ್ನು ಮಂಗಳಮುಖಿಯರು ತೀರಿಹೋದರೆ ಅವರ ಅಂತ್ಯಸಂಸ್ಕಾರವನ್ನು ರಾತ್ರಿಯೇ ಮಾಡಲಾಗತ್ತೆ. ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡುವುದನ್ನ ಒಪ್ಪುವುದಿಲ್ಲ. ಯಾಕಂದ್ರೆ ಅದು ಧರ್ಮಕ್ಕೆ ವಿರುದ್ಧವಾಗಿದೆ. ಆದ್ರೆ ಮಂಗಳಮುಖಿಯರು ಯಾವುದೇ ಸಮುದಾಯದವರಾಗಿದ್ದರೂ, ಅವರ ಅಂತ್ಯ ಸಂಸ್ಕಾರ ಸೂರ್ಯಾಸ್ತದ ಬಳಿಕವೇ ಮಾಡಲಾಗುತ್ತದೆ. ಮತ್ತು ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ಕೆಲವರಷ್ಟೇ ಸೇರಿ ಅವರ ಅಂತಿಮ ಸಂಸ್ಕಾರ ಮಾಡುತ್ತಾರೆ.
ಯಾಕಂದ್ರೆ ಮಂಗಳಮುಖಿಯ ಮೃತದೇಹವನ್ನು ಸಾಮಾನ್ಯರು ನೋಡಿದರೆ, ಅವರು ಮುಂದಿನ ಜನ್ಮದಲ್ಲಿ ಮಂಗಳಮುಖಿಯರಾಗಿ ಹುಟ್ಟುತ್ತಾರೆಂದು ಹೇಳಲಾಗತ್ತೆ. ಹಾಗಾಗಿ ಆ ನರಕದ ಜೀವನ ಯಾರಿಗೂ ಸಿಗಬಾರದೆಂಬ ಕಾರಣಕ್ಕೆ ಮಂಗಳಮುಖಿ ಸತ್ತಾಗ ಆಕೆಯ ಹೆಣ ಯಾರಿಗೂ ಕಾಣದಂತೆ ತೆಗೆದುಕೊಂಡು ಹೋಗಿ ಸುಡಲಾಗುತ್ತದೆ. ಮತ್ತು ಅವರ ಹೆಣದ ಮೇಲೆ ಬಿಳಿ ವಸ್ತ್ರ ಬಿಟ್ಟರೆ ಹೂ, ಹೂವಿನ ಹಾರವೆಲ್ಲ ಹಾಕುವುದಿಲ್ಲ. ಅಲ್ಲದೇ ಸತ್ತವರ ಹೆಸರಿನಲ್ಲಿ ದಾನ ಧರ್ಮವನ್ನೂ ಮಾಡಲಾಗುತ್ತದೆ. ಯಾಕಂದ್ರೆ ಆ ಜೀವ ಮುಂದಿನ ಜನ್ಮದಲ್ಲಿ ಯಾವುದಾದರೂ ಒಂದು ಲಿಂಗದಲ್ಲಿ ಹುಟ್ಟಲಿ ಎಂದು.
ಇನ್ನು ನಿಮಗೆ ಎಲ್ಲಾದರೂ ಮಂಗಳಮುಖಿಯರು ಸಿಕ್ಕರೆ, ಅವರಿಗೆ ಕೋಪ ಬರುವ ಹಾಗೆ ನಡೆದುಕೊಳ್ಳಬೇಡಿ. ಯಾಕಂದ್ರೆ ಮಂಗಳಮುಖಿಯರ ಹಾರೈಕೆ ಎಷ್ಟು ಒಳ್ಳೆಯದೋ, ಅವರ ಶಾಪ ಅಷ್ಟೇ ಕೆಟ್ಟದ್ದು. ನಿಮ್ಮ ಬಳಿ ಮಂಗಳಮುಖಿಯರು ದುಡ್ಡು ಕೇಳಲು ಬಂದ್ರೆ, ಸಾಧ್ಯವಾದಷ್ಟು ದುಡ್ಡು ಕೊಟ್ಟು, ಅವರಿಂದ 1 ರೂಪಾಯಿ ಪಡೆಯಿರಿ. ಆ ಒಂದು ರೂಪಾಯಿ ನಿಮ್ಮ ಜೇಬಿನಲ್ಲಿಟ್ಟುಕೊಂಡರೆ ನಿಮ್ಮ ಹಣಕಾಸಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.