ನಮಗೆ ಗೋಲ್ಡನ್ ಟೆಂಪಲ್ ಅಂದಾಕ್ಷಣ ನೆನಪಾಗೋದು, ಅಮೃತಸರದಲ್ಲಿರುವ ಚಿನ್ನದ ದೇಗುಲ. ಆದ್ರೆ ದಕ್ಷಿಣ ಭಾರತದಲ್ಲೂ ಕೂಡ ಒಂದು ಪ್ರಸಿದ್ಧ ಗೋಲ್ಡನ್ ಟೆಂಪಲ್ ಇದೆ. ಆದ್ರೆ ಇದು ದೇವಿ ದೇವಸ್ಥಾನ. ಹಾಗಾದ್ರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ..? ಏನು ಈ ದೇವಸ್ಥಾನದ ಮಹಾತ್ಮೆ ಅನ್ನೋದನ್ನ ನೋಡೋಣ ಬನ್ನಿ..
600 ಕೋಟಿ ರೂಪಾಯಿಯ 1,500 ಕೆಜಿ ಚಿನ್ನವನ್ನು ಬಳಸಿ, ತಮಿಳುನಾಡಿನ ವೆಲ್ಲೂರು ಮಹಾಲಕ್ಷ್ಮೀ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದರ ಶಿಲ್ಪಕಲೆಯೇ ಅತ್ಯದ್ಭುತವಾಗಿದೆ. ಹಚ್ಚಹಸುರಿನ ಪ್ರದೇಶದಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ, ಶಿಲಾಬಾಲಿಕೆಯ ಪ್ರತಿಮೆ, ಝರಿ, ನೀರಿನ ಕಾರಂಜಿ, ದೇವಸ್ಥಾನದ ಸುತ್ತಲೂ ತುಂಬಿಕೊಂಡು ಕಣ್ಮನ ಸೆಳೆಯುವ ನೀರು. ಇವೆಲ್ಲವನ್ನೂ ನೋಡುತ್ತಿದ್ದರೆ, ದೇವಲೋಕಕ್ಕೆ ಬಂದ ಅನುಭವವಾಗುತ್ತದೆ. ಅಷ್ಟು ಚಂದವಿದೆ ಈ ದೇವಸ್ಥಾನ.
ಈ ದೇವಸ್ಥಾನದಲ್ಲಿ ಉಚಿತ ಪ್ರವೇಶವಿದೆ. ಆದ್ರೆ ದೇವರನ್ನ ಹತ್ತಿರದಿಂದ ನೋಡುವುದಿದ್ದರೆ, ನೂರು ರೂಪಾಯಿ ನೀಡಿ, ಟಿಕೇಟ್ ಪಡೆದು ಹೋಗಬೇಕು. ಬೇರೆ ದೇವಸ್ಥಾನದಲ್ಲಿ ದೇವರ ಫೋಟೋ ತೆಗಿಯುವುದನ್ನು ನಿಷೇಧಿಸಲಾಗಿದೆ. ಆದ್ರೆ ಇಲ್ಲಿ ಕ್ಯಾಮೆರಾ ಮತ್ತು ಮೊಬೈಲ್‌ಗಳನ್ನ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಅದನ್ನ ಇಡಲು ಬೇರೆ ವ್ಯವಸ್ಥೆ ಮಾಡಲಾಗಿದೆ.