ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಕಾರಣವೇನು..?

ತ್ರಿಗುಣ, ತ್ರಿನೇತ್ರನಾದ ಶಿವನಿಗೆ ಬಿಲ್ವ ಪತ್ರೆಯನ್ನ ಅರ್ಪಿಸಲಾಗುತ್ತದೆ. ಈ ಬಿಲ್ವಪತ್ರೆ ಅಂದ್ರೆ ಶಿವನಿಗೂ ಅಚ್ಚುಮೆಚ್ಚು. ವಿಶೇಷ ಅಂದ್ರೆ ಬಿಲ್ವಪತ್ರೆ ಕೂಡ ಮೂರು ಎಲೆಯಿಂದ ಕೂಡಿದ್ದು. ಇದು ಬ್ರಹ್ಮ, ವಿಷ್ಣು, ಮಹೇಶ್ವರರನ್ನ ಸೂಚಿಸುವ ಎಲೆಯಾಗಿದೆ. ಹಾಗಾದ್ರೆ ಈ ಎಲೆಯನ್ನ ಶಿವನಿಗೆ ಅರ್ಪಿಸುವ ಹಿಂದಿರುವ ಸತ್ಯವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬಿಲ್ವ ಪತ್ರೆಯ ಎಲೆ ಇಲ್ಲದೇ ಮಾಡಿದ ಶಿವಪೂಜೆ ವ್ಯರ್ಥ ಎಂದು ಹೇಳಲಾಗುತ್ತದೆ. ಅಷ್ಟು ಮಹತ್ವದ ಸ್ಥಾನವಿದೆ ಬಿಲ್ವಪತ್ರೆಗೆ. ಎಲ್ಲ ಕಥೆಯಲ್ಲೂ ಬರುವಂತೆ ಈ ಬಿಲ್ವಾರ್ಚನೆಗೂ ಸಮುದ್ರ ಮಂಥನನವೇ ಕಾರಣ. ವಿಷಕಂಠನಿಗೆ ಬಿಲ್ವಪತ್ರೆಯನ್ನು ತಿನ್ನಿಸಿದಾಗ, ಅವನ ದೇಹದ ಉಷ್ಣತೆ ಕಡಿಮೆಯಾಯಿತು. ಹಾಗಾಗಿ, ಬಿಲ್ವಪತ್ರೆಯನ್ನ ಅರ್ಪಿಸಿದರೆ ಶಿವ ಪ್ರಸನ್ನನಾಗುತ್ತಾನೆಂದು ಹೇಳಲಾಗುತ್ತದೆ. ಅಲ್ಲದೇ, ಶಿವರಾತ್ರಿಯ ದಿನ ಉಪವಾಸವಿದ್ದು, ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿದರೆ ಶಿವನ ಸನ್ನಿಧಿ ಪ್ರಾಪ್ತಿಯಾಗುತ್ತದೆ ಅನ್ನುವ ನಂಬಿಕೆಯೂ ಇದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಪುಟ್ಟ ಕಥೆಯಿದೆ. ಒಂದು ಊರಲ್ಲಿ ಓರ್ವ ಕೆಟ್ಟ ಹೆಂಗಸಿದ್ದಳು. ಅವಳು ಜೀವನವಿಡೀ ಪಾಪಕರ್ಮಗಳನ್ನೇ ಮಾಡಿದ್ದಳು. ಅವಳು ತನ್ನ ಕೊನೆಯ ದಿನಗಳಲ್ಲಿ ಉಳಿಯಲು ಜಾಗವಿಲ್ಲದೇ, ತಿನ್ನಲು ಆಹಾರವಿಲ್ಲದೇ, ಕುಡಿಯಲು ನೀರಿಲ್ಲದೇ, ಊರೂರು ಸುತ್ತುತ್ತ ಗೋಕರ್ಣಕ್ಕೆ ಬಂದಳು. ಇಡೀ ದಿನ ಆಕೆ ಏನೂ ತಿಂದಿರಲಿಲ್ಲ, ಕುಡಿದಿರಲಿಲ್ಲ, ಒಂದು ಮರದ ಅಡಿ ಕುಳಿತು ಕೊಳ್ಳಲು ಬಂದಳು. ಆ ಮರದಡಿ ಶಿವಲಿಂಗವಿತ್ತು. ಆಕೆ ಶಿವನನ್ನು ಸ್ಮರಿಸುತ್ತ, ಆ ಮರಕ್ಕೆ ಒರಗಿ ಮಲಗಿದಳು. ಆ ಮರದ ಎಲೆ ಶಿವಲಿಂಗ ಮೇಲೆ ಬಿತ್ತು. ಆಕೆ ಶಿವನಾಮಸ್ಮರಣೆ ಮಾಡುತ್ತ ಪ್ರಾಣ ಬಿಟ್ಟಳು.

ಆಕೆಯನ್ನ ಯಮಕಿಂಕರರು ಬಂದು ಸ್ವರ್ಗಕ್ಕೆ ಕರೆದುಕೊಂಡು ಹೋದರು. ಅರೇ, ಇದೇನಿದು ಜೀವನವಿಡಿ ಪಾಪಕರ್ಮಗಳನ್ನು ಮಾಡಿದವಳಿಗೆ ಸ್ವರ್ಗ ಸಿಕ್ಕಿದೆ ಎಂದು ನೀವು ಹೇಳಬಹುದು. ಇದು ಸಿಕ್ಕಿದ್ದಕ್ಕೆ ಕಾರಣವೇನಂದ್ರೆ, ಆಕೆ ಶಿವರಾತ್ರಿಯ ಇಡೀ ದಿನ ಉಪವಾಸವಿದ್ದಳು, ಊರೂರು ಸುತ್ತಿದ ಕಾರಣ ನಿದ್ದೆ ಮಾಡಲಿಲ್ಲಿ. ಅಲ್ಲಿಗೆ ಶಿವರಾತ್ರಿ ಉಪವಾಸ ಮತ್ತು ಜಾಗರಣೆಯಾಯಿತು. ಶಿವಲಿಂಗಕ್ಕೆ ಒರಗಿ ಮಲಗಿ ಶಿವನಾಮಸ್ಮರಣೆ ಮಾಡುತ್ತ ಮರದಡಿ ಪ್ರಾಣ ಬಿಟ್ಟಳು. ಆ ಮರ ಬಿಲ್ವ ಪತ್ರೆಯ ಮರವಾಗಿತ್ತು, ಅದರಿಂದ ಬಿಲ್ವಪತ್ರೆಯ ಎಲೆ ಶಿವಲಿಂಗಕ್ಕೆ ಸಮರ್ಪಿತವಾಗಿತ್ತು. ಹಾಗಾಗಿ ಆಕೆಗೆ ಸ್ವರ್ಗ ಸಿಕ್ಕಿತು.

About The Author