International News: ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದೆ. ಅಮೆರಿಕದ ಲಾಸ್ ಏಂಜಲೀಸ್‌ನಿಂದ ಹೊರಟಿದ್ದ ಭಾರತೀಯ ವಿಮಾನವು ಏಪ್ರಿಲ್ 10ರ ಸಂಜೆ ಪಾತಕಿಯನ್ನು ಹೊತ್ತು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಬಳಿಕ ರಾಣಾ ವೈದ್ಯಕೀಯ ತಪಾಸಣೆ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದಾದ ನಂತರ ಅವನನ್ನು ನೇರವಾಗಿ ಬಿಗಿ ಭದ್ರತೆಯಲ್ಲಿ ಕರೆತಂದು ಪಟಿಯಾಲದ ಎನ್‌ಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇನ್ನೂ ಎನ್‌ಐಎ ವಿಶೇಷ ನ್ಯಾಯಾಧೀಶರಾದ ಚಂದರ್‌ಜೀತ್ ಸಿಂಗ್ ಅವರು ತಡರಾತ್ರಿಯವರೆಗೂ ವಾದ – ಪ್ರತಿವಾದಗಳನ್ನು ಆಲಿಸಿದ್ದರು. ಬಳಿಕ 20 ದಿನಗಳ ಕಾಲ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಎನ್‌ಐಎ ಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. ಅಂತಿಮವಾಗಿ 18 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಇನ್ನೂ ಸದ್ಯ ಎನ್‌ಐಎ ವಶದಲ್ಲಿರುವ ರಾಣಾನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪ್ರಮುಖವಾಗಿ ಮುಂಬೈ ದಾಳಿಯ ಕುರಿತು ಪಾತಕಿಗೆ ಎನ್‌ಐಎ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದೆ. ಅಲ್ಲದೆ ಅದರಲ್ಲೂ ಮುಖ್ಯವಾಗಿ ಮುಂಬೈ ದಾಳಿಯ ಸಂಚಿನ ಕುರಿತು ಇನ್ನಷ್ಟು ಸ್ಫೋಟಕ ಮಾಹಿತಿಗಳನ್ನು ರಾಣಾನಿಂದ ಬಾಯಿ ಬಿಡಿಸುವ ಎನ್‌ಐಎ ಮಾಡಲಿದೆ. ದಾಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾರು ಯಾರು ಬೆಂಬಲ ನೀಡಿದ್ದಾರೆ..? ಲಷ್ಕರ್ ಎ ತೊಯ್ಬಾ ಹಾಗೂ ಎಲ್‌ಇಟಿ ಉಗ್ರರ ನಂಟಿನ ಕುರಿತು ಮಾಹಿತಿ ಪಡೆಯಲಿದೆ. ಈ ಕೃತ್ಯಕ್ಕಾಗಿ ಏನೆಲ್ಲ ಪೂರ್ವ ತಯಾರಿ ಮಾಡಕೊಳ್ಳಲಾಗಿತ್ತು..? ಅಲ್ಲದೆ ದಾಳಿಯ ಬಳಿಕ ಯವ್ಯಾವ ಸ್ಥಳಗಳನ್ನು ಟಾರ್ಗಟ್ ಮಾಡಲಾಗಿತ್ತು..? ಎಂಬೆಲ್ಲ ಅನೇಕ ಪ್ರಶ್ನೆಗಳಿಂದ ರಾಣಾನಿಗೆ ಎನ್‌ಐಯ ಡ್ರಿಲ್ ಮಾಡುತ್ತಿದೆ
ಅಲ್ಲದೆ ಈ ರಾಣಾ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಎನ್‌ಐಯ ಮುಂಬೈಗೂ ಕರೆದುಕೊಂಡು ಹೋಗಲಿದೆ. ಅಲ್ಲಿ ಯಾವ್ಯಾವ ಸ್ಥಳಗಳಲ್ಲಿ ಹೇಗೆ ಸಂಚು ರೂಪಿಸಲಾಗಿತ್ತು. ಇದರಲ್ಲಿ ಇನ್ನು ಯಾರಾದರೂ ಶಾಮೀಲಾಗಿದ್ದಾರಾ..? ಈ ದಾಳಿಗೆ ಯಾವ್ಯಾವ ಮೂಲದಿಂದ ಎಷ್ಟು ಹಣ ಹಾಗೂ ಬಾಂಬ್‌ಗಳು ರವಾನೆಯಾಗಿದ್ದವು.? ಕೃತ್ಯಕ್ಕಾಗಿ ಭಾರತದಲ್ಲಿ ಯಾರಾದರೂ ಹಣ ನೀಡಿದ್ದರಾ ಎನ್ನುವ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವ ಕೆಲಸವನ್ನು 12 ಜನರಿರುವ ಎನ್‌ಐಎ ತಂಡವು ಮಾಡುತ್ತಿದೆ.
ಮೀಡಿಯಾ ಸ್ಟಂಟ್ ಮಾಡಿರಲಿಲ್ಲ..
ರಾಣಾ ಹಸ್ತಾಂತರದ ವಿಚಾರಕ್ಕೆ ಭಾರತದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪ್ರಧಾನಿ ಮೋದಿ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ನಾವು ಪರಿಶ್ರಮ ಹಾಕಿದ್ದ ಲಾಭವನ್ನು ಮೋದಿ ಸರ್ಕಾರ ಅನುಭವಿಸುತ್ತಿದೆ. ಯುಪಿಎ ಅವಧಿಯಲ್ಲಿಯೇ ರಾಣಾನನ್ನು ಬಾರತಕ್ಕೆ ಕರೆತರುವ ಪ್ರಕ್ರಿಯೆಗಳು ಪ್ರಾರಂಭವಾಗಿದ್ದವು. ಅಂದಿನ ಕಾಂಗ್ರೆಸ್ ಸರ್ಕಾರದ ಸ್ಥಿರ ಹಾಗೂ ಪ್ರಬಲ ರಾಜತಾಂತ್ರಿಕತೆಯ ಪರಿಣಾಮ ರಾಣಾ ಭಾರತಕ್ಕೆ ಬರುವಂತಾಗಿದೆ. ಆರೋಪಿಗಳ ವಿರುದ್ಧ ದಿಲ್ಲಿಯಲ್ಲಿ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಗಳನ್ನು ಜಾರಿಗೊಳಿಸಿತ್ತು ಹಾಗೂ ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ಇವೆಲ್ಲ ಇಂದಿನಂತೆ ಮೀಡಿಯಾ ಸ್ಟಂಟ್ ಆಗಿರಲಿಲ್ಲ, ಬದಲಿಗೆ ಕಾನೂನಾತ್ಮಕವಾಗಿ ಗೌಪ್ಯತೆಯಿಂದ ನಡೆಸಲಾಗಿದ್ದ ರಾಜತಾಂತ್ರಿಕತೆಯ ನಿಲುವಿನ ಭಾಗವಾಗಿತ್ತು ಎಂದು ಇದರ ಶ್ರೇಯಸ್ಸು ಪಡೆಯುತ್ತಿರುವ ಬಿಜೆಪಿ ನಾಯಕರಿಗೆ ಚಿದಂಬರಂ ಕುಟುಕಿದ್ದಾರೆ.
ಕಾಂಗ್ರೆಸ್ ಉಗ್ರರಿಗೆ ಬಿರಿಯಾನಿ ಉಣಿಸಿತ್ತು..
ಇನ್ನೂ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿಕೆಗೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿರುಗೇಟು ನೀಡಿದ್ದಾರೆ. 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದವರನ್ನು ಶಿಕ್ಷಿಸಲು ಕಾಂಗ್ರೆಸ್ ಏನೂ ಮಾಡಲಿಲ್ಲ. ಅಂದಿನ ಯುಪಿಎ ಸರ್ಕಾರ ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್‌ಗೆ ಬಿರಿಯಾನಿ ಉಣಿಸುವ ಕೆಲಸ ಮಾಡಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಭಯೋತ್ಪಾದಕರು ನಾವು ನಿಂತಿರುವ ಹೋಟೆಲ್‌ನ ಮೇಲೆಯೇ ದಾಳಿ ಮಾಡಿದ್ದರು. ಅಲ್ಲಿ ಜನರು ಸತ್ತರು. ಆದರೆ, ಭಾಗಿಯಾಗಿರುವವರನ್ನು ಶಿಕ್ಷಿಸಲು ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಕಿಡಿ ಕಾಡಿದ್ದಾರೆ. ಅಲ್ಲದೆ ಆಗ ಸಿಕ್ಕಿಬಿದ್ದ ಕಸಬ್‌ಗೂ ಬಿರಿಯಾನಿ ಬಡಿಸಲಾಯಿತು. ನಮ್ಮ ದೇಶದ ಮೇಲೆ ದಾಳಿ ಮಾಡಿದವರನ್ನು ಶಿಕ್ಷಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ. ಇದೀಗ ಅಪರಾಧಿಗಳು ಶಿಕ್ಷೆ ಅನುಭವಿಸುತ್ತಾರೆ. ಅಪರಾಧದಲ್ಲಿ ಭಾಗಿಯಾಗಿರುವವರಿಗೆ ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಪ್ರತಿಯೊಬ್ಬ ಭಾರತೀಯ ನಾಗರಿಕನೂ ಪ್ರಧಾನಿ ಮೋದಿ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಗೋಯಲ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸಂತೋಷ್ ಹೆಗ್ಡೆ ಶಿಷ್ಯ ದಯಾನ್ ಕೃಷ್ಣನ್..
ಕಳೆದ 2008ರ ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವ್ವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆಯಲ್ಲಿ ಎನ್‌ಐಎ ಪರವಾಗಿ ಹೋರಾಡಿದ್ದು ಬೆಂಗಳೂರು ನಂಟಿನ ದಯಾನ್ ಕೃಷ್ಣನ್. ಅಲ್ಲದೆ ಈ ಹಿರಿಯ ವಕೀಲ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಸಂತೋಷ್ ಹೆಗ್ಡೆ ಅವರ ಶಿಷ್ಯ ಎಂಬುದು ಕೂಡ ಹೆಮ್ಮೆಯ ಸಂಗತಿಯಾಗಿದೆ. ಗಡೀಪಾರು ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೃಷ್ಣನ್ ಅವರನ್ನು ಇದೀಗ ರಾಣಾ ವಿರುದ್ಧ ನ್ಯಾಯಾಲಯದಲ್ಲಿ ಎನ್‌ಐಎ ಪರವಾಗಿ ವಾದ ಮಂಡಿಸಲು ನಿಯೋಜಿಸಲಾಗಿದೆ. ದಯಾನ್ ಕೃಷ್ಣನ್ 1993ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ಬಳಿಕ ಸಂತೋಷ್ ಹೆಗ್ಡೆ ಅವರು ವಕೀಲಿಕೆ ನಡೆಸುತ್ತಿದ್ದ ವೇಳೆ ಅವರ ಶಿಷ್ಯರಾಗಿಯೂ ಕೃಷ್ಣನ್ ಸೇವಾನುಭವ ಪಡೆದುಕೊಂಡಿದ್ದರು. ತದನಂತರದಲ್ಲಿ ದೆಹಲಿಗೆ ತೆರಳಿದ್ದ ಕೃಷ್ಣನ್ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದ್ದರು.
ಒಂದೂವರೆ ದಶಕದ ಕಾನೂನು ಸಂಘರ್ಷ..!
ಇನ್ನೂ ಇಷ್ಟು ದಿನಗಳ ಕಾಲ ಅಮೆರಿಕದ ವಶದಲ್ಲಿದ್ದ ಪಾಕಿಸ್ತಾನ ಮೂಲದ ಕೆನಡಿಯನ್ ಪ್ರಜೆ ರಾಣಾನಿಗೆ ಬಾರತ ನೆಲದ ಕಾನೂನಿ ಪ್ರಕಾರ ವಿಚಾರಣೆ ನಡೆಯಲಿದೆ. ಪ್ರಮುಖವಾಗಿ ಉಗ್ರರ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಸಂತ್ರಸ್ತರ ಕುಟುಂಬಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಮಹತ್ವದ ಹೆಜ್ಜೆ ಇಟ್ಟಿದೆ. ಅಲ್ಲದೆ ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಎಳೆತರಲು ಸುದೀರ್ಘ ವರ್ಷಗಳ ಕಾಲದ ರಾಜತಾಂತ್ರಿಕ ಪ್ರಯತ್ನವೂ ನಡೆದಿತ್ತು. ಒಂದೂವರೆ ದಶಕದ ಕಾನೂನು ಸಂಘರ್ಷದ ಪರಿಶ್ರಮವೂ ಈ ಕಾರ್ಯದಲ್ಲಿ ಅಡಗಿದೆ. ಇಷ್ಟೇ ಅಲ್ಲದೆ ವಿದೇಶಾಂಗ, ಕಾನೂನು ಹಾಗೂ ಗುಪ್ತಚರ ಇಲಾಖೆಗಳ ನಿರಂತರ ಪ್ರಯತ್ನದ ಫಲವಾಗಿ ರಕ್ತಪಿಪಾಸು ರಾಣಾ ಭಾರತಕ್ಕೆ ಬರುವಂತಾಗಿದೆ.
ಅಲ್ಲದೆ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಅಮೆರಿಕ ಮೂಲದ ಡೇವಿಡ್ ಕೊಲ್ಮನ್ ಹೆಡ್ಲಿ ಹಾಗೂ ಈ ರಾಣಾನ ವಿರುದ್ಧ 2009ರಲ್ಲಿ ಭಾರತೀಯ ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿಕೊಂಡಿತ್ತು. ಅಷ್ಟರಲ್ಲಾಗಲೇ ಅಮೆರಿಕ ಸೇರಿದ್ದ ರಾಣಾನನ್ನು ಕತ್ತು ಹಿಡಿದು ಭಾರತಕ್ಕೆ ತರಲು ಅನೇಕ ಕಾನೂನು ತೊಡಕುಗಳು ಎದುರಾಗಿದ್ದವು. ಇನ್ನೂ ಮುಂಬೈ ದಾಳಿಯಲ್ಲಿ ಈತನದ್ದು ಯಾವುದೇ ನೇರವಾದ ಪಾತ್ರವಿಲ್ಲ ಎಂದು ಅಮೆರಿಕದ ನ್ಯಾಯಾಲಯವು 2011ರಲ್ಲಿ ಅಮೆರಿಕದ ಕೋಪನ್‌ಹೇಗ್‌ನಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಅಲ್ಲಿನ ನ್ಯಾಯಾಲಯವು 14 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಅಗ ಕಾನೂನು ಹೋರಾಟದಲ್ಲಿ ಭಾರತಕ್ಕೆ ಹಿನ್ನಡೆಯಾದರೂ ಸಹ ಭಾರತ ಅದನ್ನು ಹಾಗೆಯೇ ಮುಂದುವರೆಸಿಕೊಂಡು ಬಂದಿತ್ತು.
ಭಾರತ ಅಂದುಕೊಂಡಂತೆ ಪಾತಕಿಯನ್ನು ಕೊರಳ ಪಟ್ಟಿ ಹಿಡಿದು ತರುವಲ್ಲಿ ಸಫಲತೆಯನು ಕಂಡಿದೆ. ಆದರೆ ಇನ್ನು ಮುಂದೆ ಇಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಹಾಗೂ ಮುಂಬೈ ದಾಳಿಯ ಸಂತ್ರಸ್ತರ ಕುಟುಬಂಬಗಳಲ್ಲಿ ಒಂದೇ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ರಾಣಾನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ವ್ಯಾಪಕ ಒತ್ತಾಯಗಳು ಕೇಳಿ ಬರುತ್ತಿವೆ. ಮುಖ್ಯವಾಗಿ ದಾಳಿಯ ಘೋರ ಪರಿಸ್ಥಿತಿ ಅನುಭವಿಸಿದ್ದ ಮಹಾರಾಷ್ಟ್ರದ ಬಹುತೇಕ ರಾಜಕೀಯ ನಾಯಕರು ಸೇರಿದಂತೆ ದೇಶದ ವಿವಿಧ ಪಕ್ಷಗಳ ಮುಖ್ಯಸ್ಥರೂ ಸಹ ರಾಣಾನನ್ನು ಹಸ್ತಾಂತರಿಸಿಕೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ. ನೂರಾರು ಜೀವಗಳನ್ನು ಬಲಿ ಪಡೆಯಲು ಕಾರಣನಾಗಿರುವ ಉಗ್ರನಿಗೆ ಕಠಿಣ ಕಾರಾಗೃಹದ ಜೊತೆಗೆ ಮರಣದಂಡನೆ ವಿಧಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.