International News: ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಸುಂಕ ಸಮರ ನಡೆಯುತ್ತಿರುವಾಗಲೇ ತಮ್ಮ ಮೇಲೆ ಪ್ರತೀಕಾರದ ತೆರಿಗೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಚೀನಾ ಬಿಗ್ ಶಾಕ್ ನೀಡಿದೆ. ಈ ಮೂಲಕ ಸೇರಿಗೆ ಸವ್ವಾ ಸೇರು ಎನ್ನುವಂತೆ ಅಮೆರಿಕಕ್ಕೆ ಕಳುಹಿಸಲಾಗುತ್ತಿದ್ದ ಅಪರೂಪದ ಲೋಹದ ರಫ್ತು ನಿಲ್ಲಿಸಲು ಚೀನಾ ತೀರ್ಮಾನಿಸಿದೆ.
ಇನ್ನೂ ಅಮೆರಿಕದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಟ್ರಂಪ್ ಜಾಗತಿಕ ಮಟ್ಟದಲ್ಲಿ ಕೆಲ ಆಘಾತಕಾರಿ ಹಾಗೂ ಜನವಿರೋಧಿ ನಿಲುವುಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಅಲ್ಲದೆ ಬಹುತೇಕ ದೇಶಗಳ ವಿರುದ್ಧ ಕಿಡಿ ಕಾರಿರುವ ಟ್ರಂಪ್ ಪ್ರತೀಕಾರದ ತೆರಿಗೆ ಹೇರಿಕೆ ಮಾಡಿ, ತಾತ್ಕಾಲಿಕವಾಗಿ ಅದನ್ನು ತಡೆ ಹಿಡಿದಿದ್ದಾರೆ. ಆದರೆ ತಮ್ಮ ಸೇಡಿನ ಭಾಗವಾಗಿ ಚೀನಾದ ಮೇಲೆ ಆ ತೆರಿಗೆಯನ್ನು ಮುಂದುವರೆಸಿದ್ದಾರೆ.ಈ ಹಿನ್ನೆಲೆಯಲ್ಲಿ ಕೆರಳಿರುವ ಚೀನಾ ಟ್ರಂಪ್‌ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಶಾಕ್ ನೀಡಲು ಮುಂದಾಗಿದೆ.
ಎಲೆಕ್ಟ್ರಾನಿಕ್ ಉಪಕರಣಗಳಿಗೆ ತೀವ್ರ ಹಿನ್ನಡೆ..
ಪ್ರಮುಖವಾಗಿ ಡಿಸ್ಟ್ರೋಸಿಯಮ್, ನಿಯೋಡೈಮಿಯಮ್ ಎನ್ನುವ ಅಪರೂಪದ ಲೋಹಗಳು ಚೀನಾದಲ್ಲಿ ಹೇರಳವಾಗಿ ಲಭ್ಯವಾಗುತ್ತವೆ. ಇವುಗಳು ಸೆಮಿ ಕಂಡಕ್ಟರ್‌ಗಳು, ಇಂಧನ ವಲಯ, ಎಲೇಕ್ಟ್ರಾನಿಕ್ ಡಿಸ್‌ಪ್ಲೇ, ರಕ್ಷಣಾ ಉಪಕರಣಗಳು ಸೇರಿದಂತೆ ಬಹುತೇಕ ತಂತ್ರಜ್ಞಾನಗಳ ಬಳಕೆಗೆ ಅಗತ್ಯವಾಗುತ್ತವೆ. ಇನ್ನೂ ಗಮನಾರ್ಹ ಅಂಶವೆಂದರೆ ಇಡೀ ವಿಶ್ವದಲ್ಲಿಯೇ ಇದರ ಉತ್ಪಾದನೆಯ ಶೇಕಡಾ 90 ರಷ್ಟು ಪಾಲು ಚೀನಾದ್ದಿದೆ. ಆದರೆ ಅಮೆರಿಕದ ತೆರಿಗೆ ನೀತಿಯಿಂದ ರೋಸಿ ಹೋಗಿರುವ ಚೀನಾ ಇದೀಗ ಇದರ ರಫ್ತಿಗೆ ನಿರ್ಬಂಧವನ್ನು ವಿಧಿಸಲು ಸಿದ್ಧವಾಗಿದೆ. ಚೀನಾ ಈ ಕ್ರಮ ಕೈಗೊಂಡರೆ ಐಟಿ ಕ್ಷೇತ್ರವನ್ನೇ ಅವಲಂಬಿಸಿರುವ ದೊಡ್ಡಣ್ಣನಿಗೆ ಭಾರೀ ಹೊಡೆತ ಬೀಳಲಿದೆ, ಇಷ್ಟೇ ಅಲ್ಲದೆ ಸೆಮಿ ಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ತೀವ್ರ ಹಿನ್ನಡೆಯಾಗಲಿದೆ.
ಬೋಯಿಂಗ್‌ಗೂ ಬ್ರೇಕ್..!
ಇನ್ನೂ ಇಷ್ಟೇ ಅಲ್ಲದೆ ನಾನು ಮಾಡಿದ್ದೆ ಕಾನೂನು, ನಾನು ಆಡಿದ್ದೆ ಆಟ ಎನ್ನುತ್ತಿದ್ದ ಟ್ರಂಪ್‌ಗೆ ಲೋಹದ ಬೆನ್ನಲ್ಲೇ ಇನ್ನೊಂದು ಆಘಾತ ನೀಡಲು ಡ್ರ್ಯಾಗನ್ ರಾಷ್ಟ್ರ ಪ್ಲಾನ್ ಮಾಡಿದೆ. ಅಮೆರಿಕದಲ್ಲಿ ತಯಾರಾಗುವ ಬೋಯಿಂಗ್ ಕಂಪನಿಯ ವಿಮಾನಗಳನ್ನು ಖರೀದಿಸುವುದನ್ನು ಚೀನಾ ಸ್ಥಗಿತಗೊಳಿಸಿದೆ. ಅಲ್ಲದೆ ಈ ಕುರಿತು ಚೀನಾ ಸರ್ಕಾರವು ತನ್ನ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲದೆ ಟ್ರಂಪ್ ರೆಸಿಪ್ರೋಕಲ್ ಟ್ಯಾಕ್ಸ್ ಪರಿಣಾಮವಾಗಿ ಈಗಾಗಲೇ ಹಾರಾಟಕ್ಕೆ ಸಿದ್ದವಾಗಿರುವ ವಿಮಾನಗಳ ಖರೀದಿಗೂ ಬ್ರೇಕ್ ಹಾಕಿದೆ. ಅಲ್ಲದೆ ವಿಮಾನಗಳ ತಯಾರಿಕೆಗಾಗಿ ಬಳಸುವ ಅಮೆರಿಕದ ಕಂಪನಿಗಳ ವಿಮಾನಕ್ಕೆ ಸಂಬಂಧಿಸಿದ ಉಪಕರಣ, ಬಿಡಿ ಭಾಗಗಳ ಖರೀದಿಯನ್ನು ಮಾಡದಂತೆ ತಾಕೀತು ಮಾಡಿದೆ. ಹಾಗೆಯೇ ಅಮೆರಿಕದೊಂದಿಗಿನ ವಿಮಾನ ಖರೀದಿಯ ಒಪ್ಪಂದಕ್ಕೂ ಚೀನಾ ಟಾಟಾ ಬೈ ಬೈ ಹೇಳಿದ್ದು, ತನ್ನ ಸ್ವಯಂ ಕೃತ ಅಪರಾಧದಿಂದ ಇದೀಗ ಟ್ರಂಪ್ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಚೆಂಡು ಚೀನಾ ಅಂಗಳದಲ್ಲಿದೆ..
ಇದೇ ವೇಳೆ, ವ್ಯಾಪಾರ ವ್ಯವಹಾರಗಳ ಕುರಿತು ಮಾತುಕತೆ ಹಳಿಗೆ ಬರುವುದು ಬಿಡುವುದು ಚೀನಾಕ್ಕೆ ಬಿಟ್ಟದ್ದು ಎಂದು ಟ್ರಂಪ್ ಹೇಳಿದ್ದಾರೆ. ಚೆಂಡು ಚೀನಾ ಅಂಗಳದಲ್ಲಿದೆ. ಚೀನಾ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ನಾವು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿಲ್ಲ ಎಂದಿರುವ ಟ್ರಂಪ್ ಹೇಳಿಕೆಯನ್ನು ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಸುದ್ದಿಗಾರರ ಎದುರು ಓದಿ ಹೇಳಿದ್ದಾರೆ. ಚೀನಾ ಮತ್ತು ಇತರ ದೇಶಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಕರೋಲಿನ್ ಲೀವಿಟ್ ವಿವರಣೆ ನೀಡಿದ್ದಾರೆ. ಅಮೆರಿಕದ ಏವಿಯೇಷನ್ ದೈತ್ಯ ಬೋಯಿಂಗ್ ಜೊತೆಗಿನ ಪ್ರಮುಖ ಒಪ್ಪಂದವನ್ನು ಚೀನಾ ಕೈಬಿಟ್ಟಿದೆ ಎಂದು ಟ್ರಂಪ್ ಹೇಳಿದ ನಂತರ ಲೀವಿಟ್ ಅವರ ಈ ಹೇಳಿಕೆ ಹೊರ ಬಂದಿದೆ.
ಟ್ರಂಪ್ ಅಧಿಕಾರಕ್ಕೇರಿದ ಬಳಿಕ ಟ್ಯಾಕ್ಸ್ ಫೈಟ್..
ಇನ್ನೂ 2025ರ ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅಮೆರಿಕ ಬಹುತೇಕ ಎಲ್ಲ ದೇಶಗಳ ಮೇಲೆ ಟಾರಿಫ್ ಹಾಕಿದ್ದಾರೆ. ಅದರಲ್ಲೂ ಚೀನಾ ಮೇಲೆ ಟ್ರಂಪ್ ಅತ್ಯಂತ ಕಠಿಣ ಕ್ರಮ ಕೈಗೊಂಡಿದ್ದಾರೆ. ಚೀನಾದಿಂದ ಅಮೆರಿಕಕ್ಕೆ ಆಮದಾಗುವ ಬಹುತೇಕ ವಸ್ತುಗಳ ಮೇಲೆ ಶೇ 145ರಷ್ಟು ಪ್ರತಿಶತ ಸುಂಕಗಳನ್ನು ವಿಧಿಸಿದ್ದಾರೆ. ರಫ್ತುದಾರರು ಅಮೆರಿಕದ ಲೆವಿಗಳಿಗಿಂತ ಮುಂಚಿತವಾಗಿ ಕಾರ್ಖಾನೆಯ ಗೇಟ್‌ಗಳಿಂದ ಸರಕುಗಳನ್ನು ಪಡೆಯಲು ಧಾವಿಸಿದ್ದರಿಂದ ಚೀನಾ ಬುಧವಾರ ತನ್ನ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ 5.4 ಪ್ರತಿಶತದಷ್ಟು ಬೆಳವಣಿಗೆಯ ಮುನ್ಸೂಚನೆ ನೀಡಿದೆ ಎಂದು ಹೇಳಿದೆ. ಅಲ್ಲದೆ ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಹಿರಿಯ ಅಧಿಕಾರಿ ಶೆಂಗ್ ಲೈಯುನ್ ಮಾತನಾಡಿ, ಅಮೆರಿಕದ ಸುಂಕಗಳು ನಮ್ಮ ದೇಶದ ವಿದೇಶಿ ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಕೆಲವು ಒತ್ತಡಗಳನ್ನು ಉಂಟು ಮಾಡಿರುವುದು ನಿಜ ಎಂದು ಅವರು ಒಪ್ಪಿಕೊಂಡಿದ್ದಾರೆ. ಟ್ರಂಪ್ ಸುಂಕ ನೀತಿಗೆ ಪ್ರತಿಯಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಸರಕು ಸಾಗಣೆ ನಿಲ್ಲಿಸುವುದಾಗಿ ಹಾಂಕಾಂಗ್ ಹೇಳಿದೆ.