International News: ನಿರಂತರ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಖಲಿಸ್ತಾನಿ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಮುಂದಾಗಬೇಕಿದೆ ಎಂದು ಅಮೆರಿಕಕ್ಕೆ ಭಾರತ ಒತ್ತಾಯಿಸಿದೆ. ಭಾರತ ಭೇಟಿಯಲ್ಲಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಖಲಿಸ್ತಾನಿಗಳ ಅಪಾಯವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಮುಖ್ಯವಾಗಿ ಕೆನಡಾ ಹಾಗೂ ಅಮೆರಿಕದ ಪೌರತ್ವ ಹೊಂದಿರುವ ಎಸ್‌ಎಫ್‌ಜೆ ಅಂದರೆ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೂ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾಗಿರುವ ಐಎಸ್‌ಐ ಜೊತೆಗೆ ಈ ಉಗ್ರ ನಂಟನ್ನು ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಪ್ರಮುಖ ನಾಯಕರಿಗೆ ಬೆದರಿಕೆ ಒಡ್ಡಿದ ಆರೋಪ ಈತನ ಸಂಘಟನೆಯ ಮೇಲಿದೆ. ಅಲ್ಲದೆ ಅಮೆರಿಕದಲ್ಲಿರುವ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿ ಈತ ದಾಳಿ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆಯನ್ನು ನಿಷೇಧಿಸುವಂತೆ ಅವರು ಮನವಿ ಮಾಡಿದ್ದಾರೆ.
ಅಲ್ಲದೆ ಅಮೆರಿಕ ಹಾಗೂ ಭಾರತ ದೇಶಗಳ ನಡುವೆ ರಕ್ಷಣಾ ಉತ್ಪಾದನಾ ಕ್ಷೇತ್ರ, ರಕ್ಷಣಾ ಮಾಹಿತಿ ವಿನಿಮಯ ಅಲ್ಲದೆ ರಕ್ಷಣಾ ಉತ್ಪಾದನೆಗೆ ಸಂಬಂಧಿಸಿದ ವಸ್ತುಗಳ ಪೊರೈಕೆಯ ಲಿಂಕ್ ನಿರ್ಮಾಣ ಮಾಡುವ ಕುರಿತು ಗಬ್ಬಾರ್ಡ್ ಹಾಗೂ ರಾಜನಾಥ್ ಸಿಂಗ್ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ.
ಇನ್ನೂ ಕಳೆದ ಕೆಲ ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತುಳಸಿ ಗಬ್ಬಾರ್ಡ್ ಅವರನ್ನು ಭೇಟಿಯಾಗಿ ಉಗ್ರ ಚಟುವಟಿಕೆಗಳ ನಿಯಂತ್ರಣದ ಕುರಿತು ಮಾತುಕತೆ ನಡೆಸಿದ್ದರು. ಅಲ್ಲದೆ ಇದೀಗ ರಾಜನಾಥ್ ಸಿಂಗ್ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೇಶ ವಿರೋಧಿ ಕೃತ್ಯಗಳನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.