ಅಹಮದಾಬಾದ್: 15ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂತಿಮ ಕದನದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪ್ರಶಸ್ತಿಗಾಗಿ ಕೊನೆಯ ಹೋರಾಟ ನಡೆಸಲಿವೆ.
ಟೈಟಾನ್ಸ್ ಚೊಚ್ಚಲ ಪ್ರಯತ್ನದಲ್ಲೆ ಫೈನಲ್ ತಲುಪಿದ್ದು ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಇನ್ನು ರಾಜಸ್ಥಾನ ತಂಡ 2008ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಇದೀಗ ಮತ್ತೆ ಪ್ರಶಸ್ತಿ ಕನಸು ಕಾಣುತ್ತಿದೆ.
ಗುಜರಾತ್ ಬೌಲಿಂಗ್ ವರ್ಸಸ್ ರಾಜಸ್ಥಾನ ಬ್ಯಾಟಿಂಗ್
ಇಂದಿನ ಫೈನಲ್ ಪಂದ್ಯ ಗುಜರಾತ್ ಬೌಲಿಂಗ್ ಹಾಗೂ ರಾಜಸ್ಥಾನ ಬ್ಯಾಟಿಂಗ್ ಎನ್ನಲಾಗುತ್ತಿದೆ. ರಾಜಸ್ಥಾನ ಪರ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್, ಶಿಮ್ರಾನ್ ಹೇಟ್ಮಯರ್ ರಂತಹ ಬ್ಯಾಟರ್ಗಳಿದ್ದಾರೆ.
ಇದಕ್ಕಿಂತ ಬಲಿಷ್ಠ ತಂಡವನ್ನು ಊಹಿಸಿಕೊಳ್ಳುವುದು ಕಷ್ಟ. ಇವರಿಗೆ ಗುಜರಾತ್ ನ ಸ್ಟಾರ್ ಬೌಲರ್ಗಳಾದ ಮೊಹ್ಮದ್ ಶಮಿ, ಲಾಕಿ ಫರ್ಗ್ಯೂಸನ್, ಅಲ್ಜಾರಿ ಜೋಸೆಫ್, ಸಾಯಿ ಕಿಶೋರ್ ಸವಾಲು ಹಾಕಿದ್ದಾರೆ.
ಟೈಟಾನ್ಸ್ ಬೌಲರ್ಗಳಿಗೆ ಜೋಸ್ ಬಟ್ಲರ್ ದೊಡ್ಡ ಸವಾಲಾಗಿದ್ದಾರೆ. ಟೂರ್ನಿಯಲ್ಲಿ ರನ್ ಮಳೆ ಸುರಿಸಿರುವ ಬಟ್ಲರ್ 800 ಕ್ಕೂ ಹೆಚ್ಚು ರನ್ ಚಚ್ಚಿದ್ದಾರೆ. ಈ ಪಂದ್ಯದಲ್ಲಿ ಶತಕ ಸಿಡಿಸಿದರೆ ಹಲವಾರು ದಾಖಲೆಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
ಟೈಟಾನ್ಸ್ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ಶುಭಮನ್ ಗಿಲ್, ವೃದ್ದಿಮಾನ್ ಸಾಹಾ, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ಗೆ ರಾಜಸ್ಥಾನ ಬೌಲರ್ಗಳಾದ ಟ್ರೆಂಟ್ ಬೌಲ್ಟ್, ಆರ್.ಅಶ್ವಿನ್, ಪ್ರಸಿದ್ಧ ಕೃಷ್ಣ, ಯಜ್ವಿಂದರ್ ಚಾಹಲ್, ಒಬೆಡ್ ಮೆಕ್ಕೊಯೆರಿಂದ ಕಠಿಣ ಸವಾಲು ಎದುರಾಗಲಿದೆ.
ಎರಡೂ ಪಂದ್ಯದಲ್ಲೂ ಗುಜರಾತ್ ಟೈಟಾನ್ಸ್ ರಾಯಲ್ಸ್ ಮೇಲೆ ಸವಾರಿ ಮಾಡಿದೆ. ಲೀಗ್ ಪಂದ್ಯದಲ್ಲಿ 37 ರನ್ ಗಳ ಅಂತರದಿಂದ ಗುಜರಾತ್ ಗೆದ್ದುಕೊಂಡಿತು. ಕ್ವಾಲಿಫೈಯರ್ 1ರಲ್ಲಿ 7 ವಿಕೆಟ್ ಗಳ ಅಂತರದಿಂದ ಗೆದ್ದಿತ್ತು.